ರಾಷ್ಟ್ರೀಯ

ಮೇಲ್ಜಾತಿ ಮೀಸಲಾತಿ: ರಾಜ್ಯಸಭೆಯಲ್ಲೂ ವಿಧೇಯಕಕ್ಕೆ ಅನುಮೋದನೆ

Pinterest LinkedIn Tumblr


ನವದೆಹಲಿ: ಬಿಜೆಪಿ ಪಾಲಿಗೆ ಚುನಾವಣೆಯ ಪ್ರಬಲ ಅಸ್ತ್ರವಾಗಿದೆ ಎಂದು ಬಿಂಬಿತವಾಗಿರುವ ಮೇಲ್ಜಾತಿ ಬಡವರಿಗೆ ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಜ್ಯಸಭೆಯ ಅನುಮೋದನೆಯೂ ಸಿಕ್ಕಿದೆ. ಇದರೊಂದಿಗೆ ಸಂಸತ್​ನ ಮೇಲ್ಮನೆ ಮತ್ತು ಕೆಳಮನೆ ಎರಡರಲ್ಲೂ ಸಂವಿಧಾನ 124ನೇ ತಿದ್ದುಪಡಿ ಮಸೂದೆಗೆ ಸಮ್ಮತಿ ಸಿಕ್ಕಂತಾಗಿದೆ. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಲೋಕಸಭೆಯಲ್ಲಿಅನುಮೋದನೆ ಸಿಕ್ಕ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಇವತ್ತು ಮಂಡನೆಯಾಯಿತು. 172 ಸದಸ್ಯಬಲದ ರಾಜ್ಯಸಭೆಯಲ್ಲಿ ವಿಧೇಯಕದ ಪರವಾಗಿ 165 ಮತಗಳು ಬಂದವು. ಇದರೊಂದಿಗೆ ಮೇಲ್ಜಾತಿ ಬಡವರಿಗೆ ಮೀಸಲಾತಿ ಕಲ್ಪಿಸುವ ಐತಿಹಾಸಿಕ ನಿರ್ಣಯವನ್ನು ಸಂಸತ್ ಕೈಗೊಂಡಿದೆ. ಇದೀಗ ಈ ಮಸೂದೆಯು ಕಾಯ್ದೆಯಾಗುವ ದಾರಿ ಸುಗಮಗೊಂಡಿದೆ.

ಮೇಲ್ಜಾತಿಯವರಿಗೆ ಮೀಸಲಾತಿ ಕಲ್ಪಿಸುವ ಈ ಬೆಳವಣಿಗೆಗೆ ದಲಿತ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ದಲಿತರನ್ನು ದಮನ ಮಾಡಲು ನಡೆದಿರುವ ಸಂಚು ಇದೆಂದು ಬಣ್ಣಿಸಿವೆ. ಆಮ್ ಆದ್ಮಿ ಪಕ್ಷ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದು, ಇದು ಮೀಸಲಾತಿ ವ್ಯವಸ್ಥೆಯನ್ನೇ ನಿರ್ಮೂಲನೆ ಮಾಡಲು ನಡೆದಿರುವ ಚಿತಾವಣಿ ಎಂದು ಬಣ್ಣಿಸಿದೆ.

ಇದಕ್ಕೂ ಮುನ್ನ, ರಾಜ್ಯಸಭೆಯಲ್ಲಿ ಮಸೂದೆ ಸುತ್ತ ಬಿಸಿಬಿಸಿ ಚರ್ಚೆಯಾಗಿ, ವಿಪಕ್ಷಗಳು ತಕರಾರು ಎತ್ತಿದ್ದವು. ಅಲ್ಲದೇ ಮೀಸಲಾತಿ ಕಲ್ಪಿಸುವ ಸಲುವಾಗಿಯೇ ಉನ್ನತ ಸಮಿತಿಯೊಂದನ್ನು ರಚಿಸುವಂತೆ ಆಗ್ರಹಿಸಿವೆ. ಈ ಮಧ್ಯೆ ಕಾಂಗ್ರೆಸ್​​ ಬಿಲ್​​ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ; ಆದರೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿಯೇ ಈ ನಿರ್ಧಾರ ಕೈಗೊಂಡಿದ್ಯಾಕೇ? ಎಂದು ಪ್ರಶ್ನಿಸಿತು. ದೇಶದಲ್ಲಿ ಉದ್ಯೋಗವೇ ಸಿಗುತ್ತಿಲ್ಲ. ನಿಮ್ಮ ಅವಧಿಯಲ್ಲಿಯೇ ಉದ್ಯೋಗಗಳ ಸಂಖ್ಯೆ ಕ್ಷೀಣಿಸಿದೆ. ಈ ಪರಿಸ್ಥಿತಿಯಲ್ಲಿ ಮೇಲ್ಜಾತಿ ಮೀಸಲಾತಿಯಿಂದ ಯಾರಿಗೆ ಲಾಭ? ಎಂದು ಪ್ರಶ್ನಿಸುವ ಮುಖೇನ ಕೇಂದ್ರಕ್ಕೆ ಕಾಂಗ್ರೆಸ್​ ಚಾಟಿ ಬೀಸಿತು.

ಹಾಗೆಯೇ ಕೃಷಿ ಕಸುಬಲ್ಲಿ ನಂಬಿಕೆಯಿಲ್ಲದೇ ಜನ ಶಿಕ್ಷಣದತ್ತ ಹೆಚ್ಚೆಚ್ಚು ಒಲವು ತೋರಿಸಲು ಪ್ರಾರಂಭಿಸಿದ್ದಾರೆ. ಆದರೆ, ಈ ಸಮುದಾಯಗಳು ಶಿಕ್ಷಣ ಮತ್ತು ಉದ್ಯೋಗದ ಕಡೆ ಮುಖ ಮಾಡಲು ಒಂದಾಗಿವೆ. ಈ ಹೊತ್ತಿಗೆ ಒಂದೋ ಆ ಕ್ಷೇತ್ರಗಳಲ್ಲಿ ಅವಕಾಶಗಳೇ ಇಲ್ಲವಾಗುತ್ತಿವೆ ಅಥವಾ ಇದ್ದರೂ ಬಹಳ ಕಡಿಮೆಯಾಗುತ್ತಿವೆ. ಹೀಗಾಗಿ ನೀವು ಮೇಲ್ಜಾತಿ ಮೀಸಲಾತಿ ಮಸೂದೆ ಜಾರಿ ಮಾಡುವ ಏಕಕಾಲದಲ್ಲಿಯೇ ಹೆಚ್ಚಿನ ಉದ್ಯೋಗ ಗಳನ್ನು ಸೃಷ್ಟಿಸಬೇಕೆಂದು ಕೇಂದ್ರಕ್ಕೆ ಕಾಂಗ್ರೆಸ್ ಆಗ್ರಹಿಸಿದೆ.

​​ನಾವು ಈ ಮೀಸಲಾತಿ ಮಸೂದೆಯನ್ನು ನೇರವಾಗಿ ಟೀಕಿಸುತ್ತಿಲ್ಲ. ಬದಲಿಗೆ ಈಗಾಗಲೇ ಮೀಸಲಾತಿ ಅಡಿಯಲ್ಲಿ ತುಂಬಬೇಕಿರುವ ಬ್ಯಾಕ್​​ಲಾಗ್​​ ಹುದ್ದೆಗಳನ್ನು ಮೊದಲು ಭರ್ತಿ ಮಾಡಬೇಕಿದೆ. ಸಾರ್ವಜನಿಕ ಸಂಸ್ಥೆಗಳೇ ಈಗ ನೇಮಕಾತಿ ಬಿಕ್ಕಟ್ಟನ್ನು ಎದುರಿಸುತ್ತಿವೆ. ಮೊದಲನೆಯದಾಗಿ, ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯೆ ಆಗುತ್ತಿಲ್ಲ. ಒಂದು ವೇಳೆ, ಖಾಲಿ ಹುದ್ದೆಗಳಿದ್ದರೂ ಪ್ರಸ್ತುತ ಸರ್ಕಾರ ಭರ್ತಿ ಮಾಡುತ್ತಿಲ್ಲ. ಹೀಗಾಗಿ ಮತ್ತೆ ಮೇಲ್ಜಾತಿಗೆ ಮೀಸಲಾತಿ ನೀಡುವುದರಿಂದ ಯಾರಿಗೆ ಲಾಭ? ಎಂದು ಖಾರವಾಗಿಯೇ ಪ್ರಶ್ನಿಸಿದೆ.

ಇನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಮೀಸಲಾತಿ ಮಸೂದೆಯನ್ನು ಯಾಕೇ? ಚುನಾವಣೆ ಹೊಸ್ತಿಲಲ್ಲಿಯೇ ಮಂಡಿಸುತ್ತಿದೆ. ಇದರ ಹಿಂದೆ ಮತ ಬ್ಯಾಂಕ್ ರಾಜಕಾರಣ ಹುನ್ನಾರವಿದೆ. ಕೇಂದ್ರ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಿರುವುದು ರಾಜಕೀಯ ನಾಟಕ. ಮೇಲ್ವರ್ಗದ ಸಮುದಾಯಕ್ಕೆ ಮೀಸಲಾತಿ ಕೊಡುವುದರಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಮೊದಲು ಆಯ್ಕೆ ಸಮಿತಿಗೆ ವಹಿಸಿ, ಅಲ್ಲಿ ಚರ್ಚೆ ನಡೆಯಲಿ ಎಂದು ಬಿಗಿಪಟ್ಟು ಹಿಡಿದಿವೆ.

ಕಾಂಗ್ರೆಸ್‌ನ ಆನಂದ್ ಶರ್ಮ ಪ್ರತಿಕ್ರಿಯಿಸಿ, ಇದೊಂದು ರಾಜಕೀಯ ನಾಟಕ. ಲೋಕಸಭಾ ಚುನಾವಣೆ ಸಮಯದಲ್ಲಿಯೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತಗಳಿಗಾಗಿ ಈ ರೀತಿ ಮಸೂದೆ ಮಂಡನೆ ಮಾಡಿದೆ. ಮೀಸಲಾತಿ ನೀಡುವ ಮಸೂದೆಯಲ್ಲಿ ಅನೇಕ ಲೋಪದೋಷಗಳಿವೆ. ಅವುಗಳ ಬಗ್ಗೆ ಚರ್ಚೆಯಾಗಬೇಕು. ಮೊದಲು ಆಯ್ಕೆ ಸಮಿತಿಗೆ ವಹಿಸಿ, ಅಲ್ಲಿ ಚರ್ಚೆಯಾಗಲಿ ಎಂದು ಆಗ್ರಹಿಸಿದರು.

ನಿನ್ನೆ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಶೇಕಡ 10 ಮೀಸಲಾತಿ ನೀಡುವ ಕುರಿತಾದ ಕೇಂದ್ರದ ಸಾಂವಿಧಾನಿಕ ಮಸೂದೆ ಪರ-ವಿರೋಧ ಚರ್ಚೆಗಳ ನಂತರ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಮಂಗಳವಾರ ಮಧ್ಯಾಹ್ನದ ವೇಳೆ ಕೇಂದ್ರ ಸರ್ಕಾರ ಮಸೂದೆಯನ್ನು ಲೋಕಸಭೆಯಲ್ಲಿ ಮುಂದಿರಿಸಲಾಗಿತ್ತು. ಮುಸ್ಲಿಮೇತರ ವಲಸೆಗಾರರಿಗಾಗಿ ಭಾರತೀಯ ಪೌರತ್ವ ಮಸೂದೆಯ ಚರ್ಚೆಯ ನಂತರ ಮೀಸಲಾತಿ ಮಸೂದೆ ಚರ್ಚೆ ಪ್ರಾರಂಭವಾಯ್ತು. ಮಸೂದೆಯ ವಿರುದ್ಧವಾಗಿ ಸಂಸತ್​​ನಲ್ಲಿ ಕೇವಲ ಮೂವರು ಸಂಸದರು ಮಾತ್ರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಬಳಿಕ 323 ಸಂಸದರು ಮಸೂದೆ ಪರವಾಗಿ ಮತ ಚಲಾಯಿಸಿದ್ದು, ಲೋಕಸಭೆಯಲ್ಲಿ ವಿಧೇಯಕ ಅಂಗೀಕಾರಗೊಂಡಿತ್ತು..

Comments are closed.