ರಾಷ್ಟ್ರೀಯ

ಶಬರಿಮಲೆಯ ಸಮೀಪದ ವಾವರ ಮಸೀದಿಗೆ ಪ್ರವೇಶಿಸಲು ಯತ್ನಿಸಿದ ಮಹಿಳೆಯರ ಬಂಧನ

Pinterest LinkedIn Tumblr


ಚೆನ್ನೈ: ಶಬರಿಮಲೆಯ ಸಮೀಪದ ವಾವರ ಮಸೀದಿಗೆ ಪ್ರವೇಶಿಸಲು ಯತ್ನಿಸಿದ ತಮಿಳುನಾಡಿನ ಮೂವರು ಮಹಿಳೆಯರನ್ನು ಕೇರಳ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.

ಬಂಧಿತ ಮಹಿಳೆಯರನ್ನು ತಿರುಪ್ಪೂರ್‌ನ ರೇವತಿ, ಸುಶೀಲ ದೇವಿ ಮತ್ತು ತಿರುನಲ್ವೇಲಿಯ ಗಾಂಧಿಮತಿ ಎಂದು ಗುರುತಿಸಲಾಗಿದೆ. ಶಬರಿಮಲೆ ಸಮೀಪ ಅಯ್ಯಪ್ಪ ಸ್ವಾಮಿಯ ಗೆಳೆಯ ಎಂದು ಕರೆಯಲಾಗುವ ವಾವರಗೆ ಮಸೀದಿ ನಿರ್ಮಿಸಲಾಗಿದ್ದು, ಅಲ್ಲಿ ಹಿಂದುಗಳು ಕೂಡ ಭಕ್ತಿಯಿಂದ ತೆರಳುತ್ತಾರೆ. ಅಯ್ಯಪ್ಪ ಹುಲಿಯ ಹಾಲು ತರಲು ಹೋಗಿದ್ದ ಸಂದರ್ಭ ಅಯ್ಯಪ್ಪನಿಗೆ ವಾವರ ಸಹಾಯ ಮಾಡಿದ್ದಾನೆ ಎಂಬ ಪ್ರತೀತಿಯಿದೆ.

ಮೂವರು ಮಹಿಳೆಯರು ತಮಿಳುನಾಡಿನ ಹಿಂದು ಮಕ್ಕಳ್ ಕಚ್ಚಿ ಸಂಘಟನೆಯ ಸದಸ್ಯರು ಎನ್ನಲಾಗಿದೆ. ವಾರಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಅವರು, ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ಇದೆ ಎಂದಾದರೆ, ಮಸೀದಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು. ಅದರಂತೆ ಮಸೀದಿ ಪ್ರವೇಶಕ್ಕೆ ಯೋಜನೆ ರೂಪಿಸಿದ್ದರು.

ಮಹಿಳೆಯರ ಜತೆ ಅವರಿಗೆ ಮಸೀದಿಗೆ ಪ್ರವೇಶಿಸಲು ಸಹಾಯ ಮಾಡಿದ ಮೂವರು ಪುರುಷರು, ವಾಹನ ಚಾಲಕನನ್ನು ಕೂಡ ಬಂಧಿಸಲಾಗಿದೆ. ಅವರು ಬರುವ ಕುರಿತು ಮಾಹಿತಿ ಪಡೆದಿದ್ದ ಕೇರಳ ಪೊಲೀಸರು, ಮುಂಚಿತವಾಗಿಯೇ ಬಿಗಿ ಬಂದೋಬಸ್ತ್‌ ಏರ್ಪಡಿಸಿ, ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಕೈಗೊಂಡಿದ್ದರು. ಸಾಮಾಜಿಕ ಶಾಂತಿ ಕದಡಲು ಯತ್ನಿಸಿದ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೂಲ ವರದಿ: ತಮಿಳು ಸಮಯಂ

Comments are closed.