ಕ್ರೀಡೆ

ಮಾರ್ಚ್​ 23ರಿಂದ ಇಂಡಿಯಾದಲ್ಲೇ ಐಪಿಎಲ್ ಕ್ರಿಕೆಟ್​ ಹಬ್ಬ!

Pinterest LinkedIn Tumblr


ವಿಶ್ವದ ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್​ ಲೀಗ್​ನ 12 ನೇ ಆವೃತ್ತಿ ಭಾರತದಲ್ಲೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಈ ಹೊಡಿ ಬಡಿಯ ಚುಟುಕು ಪಂದ್ಯಾಟಗಳು ಮಾರ್ಚ್​ 23 ರಿಂದ ಆರಂಭವಾಗಲಿದ್ದು, ಫೈನಲ್ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.

ಈ ಹಿಂದೆ ದೇಶದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್​ ಅನ್ನು ದುಬೈ ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡಿತ್ತು. ಈ ಸುದ್ದಿಗಳಿಗೆ ತೆರೆ ಎಳೆಯುವಂತೆ ಉದ್ಘಾಟನಾ ದಿನಾಂಕವನ್ನು ಪ್ರಕಟಿಸಿರುವ ಬಿಸಿಸಿಐ ದೇಶದಲ್ಲೇ ಪಂದ್ಯವನ್ನು ಆಯೋಜಿಸಲು ತೀರ್ಮಾನಿಸಿದೆ.

2009 ರಲ್ಲಿ ದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ಐಪಿಎಲ್​ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಅದೇ ರೀತಿ 2014ರ ಚುನಾವಣೆ ವೇಳೆ ದುಬೈನಲ್ಲಿ ಆಯೋಜಿಸಲಾಗಿತ್ತು. ಹೀಗಾಗಿಯೇ ಈ ಬಾರಿ ಕೂಡ ಐಪಿಎಲ್​ ವಿದೇಶದಲ್ಲಿ ನಡೆಯಲಿದೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿತು.

ಮಂಗಳವಾರ ನವದೆಹಲಿಯಲ್ಲಿ ನಡೆದ ಬಿಸಿಸಿಐ ಆಡಳಿತ ಸಮಿತಿಯ ಸಭೆಯಲ್ಲಿ 12ನೇ ಆವೃತ್ತಿಯ ಟೂರ್ನಿ ಆಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನೇಮಿತ ಆಡಳಿತ ಸಮಿತಿಯ ಸಲಹೆಗಳನ್ನು ಕೂಡ ಪಡೆಯಲಾಗಿದೆ.​

ಮೇ. 30 ರಿಂದ ವಿಶ್ವಕಪ್ ಕ್ರಿಕೆಟ್​ ಕೂಡ ಆರಂಭವಾಗಲಿದೆ. ಹೀಗಾಗಿ ಮೇ 15ರೊಳಗೆ ಐಪಿಎಲ್​ಗೆ ತೆರೆ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮುಂದಿನ ಮಾರ್ಚ್​ನಿಂದ ಕ್ರಿಕೆಟ್​ ಪ್ರೇಮಿಗಳಿಗೆ ಬ್ಯಾಕ್​ ಟು ಬ್ಯಾಕ್​ ಐಪಿಎಲ್, ವರ್ಲ್ಡ್​ಕಪ್​ ಪಂದ್ಯಗಳ ರಸದೌತಣ ಸಿಗಲಿದೆ.

ವೇಳಾಪಟ್ಟಿ ಸೋರಿಕೆ:
ಈ ಹಿಂದೆ ಬಿಸಿಸಿಐ ದುಬೈನಲ್ಲಿ ಟೂರ್ನಿ ಆಯೋಜಿಸಲಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಮ್ಯಾಚುಗಳ ವೇಳಾಪಟ್ಟಿಯೊಂದು ಲೀಕ್ ಆಗಿತ್ತು. ಆದರೆ ಈ ವೇಳಾಪಟ್ಟಿಯಲ್ಲಿ ಪಂದ್ಯಗಳು ಮಾರ್ಚ್​ 29 ರಿಂದ ಆರಂಭವಾಗಲಿದೆ ಎಂದು ತಿಳಿಸಲಾಗಿತ್ತು.
Loading…

ಆದರೆ ಈ ಹಿಂದೆ ಸೋರಿಕೆಯಾಗಿದ್ದ ವೇಳಾಪಟ್ಟಿಗಿಂತ 6 ದಿನ ಮುಂಚಿತವಾಗಿ ಇದೀಗ ಐಪಿಎಲ್ ಕಾದಾಟ ಆರಂಭವಾಗಲಿದೆ. ಇದೀಗ ಮತ್ತೊಮ್ಮೆ ಈ ವೇಳಾಪಟ್ಟಿ ವೈರಲ್​ ಆಗಿದ್ದು, ಪಂದ್ಯದ ದಿನಾಂಕ ಮತ್ತು ಸ್ಥಳ ಮಾತ್ರ ಬದಲಾಗಲಿದೆ. ಮಾರ್ಚ್​ 29 ರಂದು ನಡೆಯಲಿದೆ ಎನ್ನಲಾಗಿದ್ದ ಮೊದಲ ಪಂದ್ಯ ಮಾರ್ಚ್​ 23 ರಂದು ಸನ್​ರೈಸರ್ಸ್​ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಜರುಗಲಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳಾಪಟ್ಟಿಯನ್ನು ಆರು ದಿನಗಳ ಮುಂಚಿತವಾಗಿ ತೆಗೆದುಕೊಂಡು ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಆದರೆ ಈ ವೈರಲ್​ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಬಿಸಿಸಿಐ ಪ್ರಕಟಿಸಲಿರುವ ಹೊಸ ವೇಳಾಪಟ್ಟಿಯಿಂದ ಮಾತ್ರ ತಿಳಿದು ಬರಲಿದೆ.

Comments are closed.