ಗಲ್ಫ್

ಜನವರಿ 11 ರಂದು ರಾಹುಲ್ ಗಾಂಧಿ ದುಬೈಗೆ; ಐತಿಹಾಸಿಕ ಕಾರ್ಯಕ್ರಮಕ್ಕೆ ನಡೆಯುತ್ತಿದೆ ಭರದಿಂದ ಸಿದ್ಧತೆ!

Pinterest LinkedIn Tumblr

ಇದೇ ಜನವರಿ 11ರಂದು, ಸುಮಾರು 40,000 ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ರಾಹುಲ್ ಗಾಂಧಿಯವರ ಈ ಐತಿಹಾಸಿಕ ಯುಎಈ ಪ್ರವಾಸಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಅನಿವಾಸಿ ಭಾರತೀಯರು ರಾಹುಲ್ ಗಾಂಧಿಯವರನ್ನು ಬೇಟಿಯಾಗಲು ಉತ್ಸುಕರಾಗಿದ್ದಾರೆ ಎಂದು ಕಾರ್ಯಕ್ರಮದ ಆಯೋಜನೆಯ ಮುಂದಾಳತ್ವ ವಹಿಸಿರುವ ಕೆಪಿಸಿಸಿ ಎನ್ಆರ್ಐ ಸೆಲ್ ಚೇರ್ಮೆನ್ ಹಾಗೂ ಐಂಡಿಯನ್ ಓವರ್ಸೀಸ್ ಕಾಂಗ್ರೆಸ್ಸಿನ ಕಾರ್ಯದರ್ಶಿಯಾದ ಡಾ. ಆರತಿ ಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

“ಜನವರಿ11 ಮತ್ತು 12ರ ಎರಡು ದಿನಗಳ ಯುಎಈ ಪ್ರವಾಸದಲ್ಲಿ ರಾಹುಲ್ ಗಾಂಧಿ ಮೊದಲ ದಿನದಂದು ಅನಿವಾಸಿ ಭಾರತೀಯ ಕಾರ್ಮಿಕರ ಜೀವನಕ್ರಮವನ್ನು ವೀಕ್ಷಿಸಿ, ಅವರೊಂದಿಗೆ ಲೇಬರ್ ಕ್ಯಾಂಪಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಲಿದ್ದು, ನಂತರ ದುಬೈನಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ಚರ್ಚಾವೇದಿಕೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಸಂಜೆ 4:30ಕ್ಕೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೇರಲಿರುವ ಸುಮಾರು 40,000 ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ದುಬೈ ಉದ್ದೇಶಿಸಿ ಮಾತನಾಡಲಿದ್ದಾರೆ” ಎಂದು ಡಾ.ಆರತಿ ಕೃಷ್ಣ ವಿವರಿಸಿದರು.

“ಪ್ರವಾಸದ ಎರಡನೇ ದಿನ ಜನವರಿ 12ರಂದು ರಾಹುಲ್ ಗಾಂಧಿ ಅಬುಧಾಭಿಯ ಶೇಕ್ ಝಾಹಿದ್ ಮಸೀದಿಗೆ ಭೇಟಿ ನೀಡಲಿದ್ದು, ಅಲ್ಲದೇ ಅಬುಧಾಭಿಯಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿಗಳೊಂದಿಗೆ ಚರ್ಚಾವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ನಂತರ ದುಬೈಗೆ ಮರಳಿ ದೆಹಲಿಗೆ ವಾಪಾಸಾಗಲಿದ್ದಾರೆ. ರಾಹುಲ್ ಗಾಂಧಿಯವರ ಯುಎಈ ಪ್ರವಾಸಕ್ಕೆ ಕಳೆದ ಒಂದು ವರ್ಷದಿಂದ ಅನಿವಾಸಿ ಭಾರತೀಯರಿಂದ ಬಹಳಷ್ಟು ಒತ್ತಾಯ, ಬೇಡಿಕೆ ಬಂದಿದ್ದು ಆದರೆ ರಾಹುಲ್ ಗಾಂಧಿಯವರ ಬಿಡುವಿಲ್ಲದ ಕಾರ್ಯಕ್ರಮ, ಚುನಾವಣಾ ಪ್ರಚಾರ ಹಾಗೂ ಸಂಸತ್ ಅಧಿವೇಶನದಿಂದಾಗಿ ಸಮಯ ಕೂಡಿ ಬಂದಿರಲಿಲ್ಲ. ಆದರೆ ಇದೀಗ ಆ ಐತಿಹಾಸಿಕ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾರ್ಯಕ್ರಮದ ಪೂರ್ವ ತಯಾರಿ ಅಚ್ಚಕಟ್ಟಾಗಿ ನಡೆಯುತ್ತಿದೆ” ಎಂದು ಪತ್ರಕರ್ತರ ಪ್ರಶ್ನೆಗೆ ಡಾ.ಆರತಿ ಕೃಷ್ಣ ಉತ್ತರಿಸಿದರು.

ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ಪಾಲ್ಗೊಳ್ಳಲು ಇಚ್ಚಿಸುವವರು ಒನ್ಲೈನ್ ರೆಜಿಸ್ಟ್ರೇಷನ್ ಮಾಡಲೇಬೇಕೆಂದು ಕಡ್ಡಾಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಉಚಿತ ತಿಂಡಿ, ಪಾನೀಯ ಹಾಗೂ ಊಟದ ವ್ಯವಸ್ಥೆಯೂ ಇದೆ ಎಂದು ಮಾಹಿತಿ ನೀಡಿದರು.

ರಾಹುಲ್ ಗಾಂಧಿಯವರ ದುಬೈ ಕ್ರಿಕೆಟ್ ಸ್ಟೇಡಿಯಂನ ಕಾರ್ಯಕ್ರಮದ ಕುರಿತು ಮತ್ತು ಉಚಿತ ಬಸ್ಸಿನ ವ್ಯವಸ್ಥೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಮುಂಗಡವಾಗಿ ತಮ್ಮ ಹೆಸರನ್ನು ನೊಂದಾಯಿಸಲು ಕೆಳಗಿನ ಸಂಖ್ಯೆಗೆ ಕರೆ ಮಾಡಲು ಸೂಚಿಸಲಾಗಿದೆ. 0554635751, 0556645631, 0506459054, 0508074646.

Comments are closed.