ಕರಾವಳಿ

ಅಕ್ರಮ ಮರಳುಗಾರಿಕೆ ಮೇಲೆ ಮುಗಿಬಿದ್ದ ಅಧಿಕಾರಿಗಳು; ಮರಳು ಡಂಪ್ ಮಾಡುವ ಸ್ಥಳದಲ್ಲಿ ಟ್ರಂಚಿಂಗ್ : ದೋಣಿ, ಪರಿಕರ ವಶಕ್ಕೆ

Pinterest LinkedIn Tumblr

ಕುಂದಾಪುರ: ರಾತ್ರಿ ನಡೆಸುತ್ತಿರುವ ಅತಿಕ್ರಮ ಮರಳು ಗಣಿ ವಿರುದ್ಧ ಅಧಿಕಾರಿಗಳು ಮುಗಿಬಿದ್ದಿದ್ದು, ನಾಡಾ ಪರಿಸರದಲ್ಲಿ ಮಂಗಳವಾರ ಸರಣಿ ಕಾರ್‍ಯಾಚರಣೆ ನಡೆಸಲಾಗಿದೆ.

ಮರಳು ಲಾರಿಗೆ ಲೋಡ್ ಮಾಡಲು ಹಾಗೂ ಮರಳು ಡಂಪ್ ಮಾಡಲು ಹೊಳೆ ತುಂಬಿ ಸಮತಟ್ಟು ಮಾಡಿದ ಜಾಗದಲ್ಲಿ ಜೆಸಿಬಿ ಮೂಲಕ ಕಂದಕ ನಿರ್ಮಿಸಲಾಗಿದ್ದು, ಮರಳು ತೆಗೆಯುವ ದೋಣಿ, ಜೆಲ್ಲು, ಕಬ್ಬಿಣದ ಮೆಟ್ಟಿಲು ಇನ್ನಿತರ ಪರಿಕರ ಜಪ್ತಿ ಮಾಡಿದ್ದು, ದೋಣಿ ನಿಲ್ಲಿಸಲು ಬಳಸುವ ಹತ್ತಾರು ಕಂಬಗಳ ಅಧಿಕಾರಿಗಳು ಕೈಗೆ ಸಿಗದಂತೆ ಮಾಡಿದ್ದಾರೆ.

ಬೈಂದೂರು ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಸಹಕಾರದಲ್ಲಿ ನಾಡಾ ವ್ಯಾಪ್ತಿ ಅತಿಕ್ರಮ ಮರಳು ಅಡ್ಡೆ ಮೇಲೆ ಬೆಳಗ್ಗೆ ಯಿಂದ ಮಧ್ಯಾಹ್ನದ ತನಕ ನಿರಂತರ ದಾಳಿ ನಡೆಸಲಾಯಿತು. ಜೋಯಿಸರಬೆಟ್ಟು, ವಕ್ಕೇರಿ ಬಳಿ ಮರಳು ತುಂಬಲು ಮಾಡಿಕೊಂಡ ಜಾಗ ತೆರವು ಮಾಡಲಾಯಿತು. ಹೊಳೆ ಬದಿಯಲ್ಲಿ ತುಂಬಿದ ಮಣ್ಣು ಹೊಳೆಗೆ ದೂಡಿ, ಮಧ್ಯದಲ್ಲಿ ಉದ್ದಾನುದ್ದಕ್ಕೂ ಕಂದಕ ತೋಡುವ ಮೂಲಕ ಅತಿಕ್ರಮ ಮರಳು ತೆಗೆಯುವ ಸಾಹಸಕ್ಕೆ ತಡೆ ನೀಡುವ ಕೆಲಸ ಮಾಡಲಾಯಿತು.
ಜೋಯಿಸರಬೆಟ್ಟು ಬಳಿ ರಾತ್ರಿ ನಡೆಸುತ್ತಿರುವ ಗಣಿಗಾಗಿ ಇಡೀ ಧರೆ ಅಗೆದು ರಸ್ತೆ ಮಾಡಲಾಗಿದ್ದು, ರಸ್ತೆ ಖಾಸಗಿ ಜಾಗದ ತೆಂಗಿನ ತೋಟದಲ್ಲಿ ಸಾಗುತ್ತದೆ. ಕಾಡಿನ ದಾರಿಯಾಗಿ ದುರ್ಗಮವಾಗಿದ್ದು, ಒಬ್ಬಿಬ್ಬರು ಹೋಗುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ವಕ್ವಾಡಿ ಬಳಿ ಖಾಸಗಿ ಜಾಗದಲ್ಲಿ ಮರಳು ಗಣಿ ನಡೆಯುತ್ತಿದ್ದರೆ, ಬಡಾಕೆರೆ ಬಳಿ ನಡೆಯುತ್ತಿರುವ ಮರಳು ಗಣಿ ಖಾಸಗಿ ವ್ಯಕ್ತಿಗೆ ಸೇರಿದೆ. ಇಲ್ಲಿ ದೊಟ್ಟಮಟ್ಟದ ಮರಳು ಗಣಿ ನಡೆಯುತ್ತದೆ. ಅಲ್ಲೇ ಬೋಟ್, ಕಬ್ಬಿಣದ ಮೆಟ್ಟಿಲು, ಬುಟ್ಟಿ ಇನ್ನಿತರ ಪರಿಕರ ಸಿಕ್ಕಿದೆ.ದೋಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ವಸ್ತುಗಳ ಪೊಲೀಸ್ ಸಮಕ್ಷಮ ಮಟ್ಟುಗೋಲು ಹಾಕಿಕೊಳ್ಳಲಾಯಿತು. ಅಕ್ರಮ ಮರಳು ಗಣಿ ಮೇಲೆ ಅಧಿಕಾರಿಗಳು ನಡೆಸಿದ ದಾಳಿಗೆ ಪರಿಸರ ವಾಸಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬೈಂದೂರು ವಿಶೇಷ ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ, ಕಂದಾಯ ನಿರೀಕ್ಷಕ ಮಂಜು, ಗ್ರಾಮ ಲೆಕ್ಕಿಗರಾದ ಪರಶುರಾಮ, ಶಿವಾನಂದ, ಪ್ರಕಾಶ, ಕೋಠಾರಿ, ಪೊಲೀಸ್ ಸಿಬ್ಬಂದಿ ಅಶೋಕ್, ಕೃಷ್ಣ ಕಾರ್‍ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸೇನಾಪುರ ಅಕ್ರಮಕ್ಕೆ ತಡೆ ಎಂದು?
ಸೌಪರ್ಣಿಕಾ ನದಿ ಸೇನಾಪುರ ಬಳಿ ನಡೆಸಲಾಗುತ್ತಿರುವ ಮರಳು ಗಣಿಗೆ ಕುಖ್ಯಾತಿ ಇದೆ. ಸೇನಾಪುರದಲ್ಲಿ ನಡೆಯುತ್ತಿರುವ ಅತಿಕ್ರಮ ಮರಳು ಗಣಿ ಮೇಲೆ ಅಂದಿನ ಎಸಿ ಶಿಲ್ಪಾ ನಾಗ್ ಸಿ.ಟಿ, ತಹಸೀಲ್ದಾರ್ ಜಿ.ಎಂ.ಬೋರ್ಕರ್ ದಾಳಿ ಸಂದರ್ಭ ಅಧಿಕಾರಿಗಳಿಗೆ ಘೋರಾವು ಹಾಕಿದ್ದರು. ಅತಿಕ್ರಮ ಮರಳು ತೆಗೆಯುತ್ತಿದ್ದರೂ, ರಸ್ತೆ ಮೇಲೆ ಹಟ್ಟಿಕಟ್ಟಿ, ಟಿಲ್ಲರ್ ಅಡ್ಡವಿಟ್ಟು ಅಧಿಕಾರಿಗಳ ವಾಹನ ಮುಂದಕ್ಕೆ ಹೋಗದಂತೆ ಅಡ್ಡಿ ಮಾಡುವ ಮೂಲಕ ಕರ್ತವ್ಯಕ್ಕೆ ಅಡ್ಡಿ ಮಾಡಿ, ಕುಖ್ಯಾತಿ ಪಡೆದಿತ್ತು. ಗಂಗೊಳ್ಳಿ ಎಸ್ಸಿ ಸುಬ್ಬಣ್ಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದ ನಂತರ ರಸ್ತೆ ತೆರವು ಮಾಡಲಾಯಿತು. ಅಂದು ಎಸಿ ತಹಸೀಲ್ದಾರ್ ಟ್ರಂಚ್ ಮಾಡಿ ಮರಳು ತೆಗೆಯಲು ಬ್ರೇಕ್ ಹಾಕಿದ್ದರು. ಆದರೆ ಈಗ ಮತ್ತೆ ಸೇನಾಪುರದಲ್ಲಿ ಅದೇ ಸ್ಥಳದಲ್ಲಿ ಮರಳು ಗಣಿ ರಾತ್ರಿ ನಡೆಯುತ್ತಿದೆ. ಕುಂದಾಪುರ ತಹಸೀಲ್ದಾರ್ ಕ್ರಮ ತೆಗೆದುಕೊಳ್ಳೋದು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಅತಿಕ್ರಮ ಮರಳು ತೆಗೆಯುವವರ ವಿರುದ್ಧ ಕಾರ್‍ಯಾಚರಣೆ ಇಷ್ಟಕ್ಕೆ ನಿಲ್ಲೋದಿಲ್ಲ. ಅದು ನಿರಂತರ ನಡೆಸಲಾಗುತ್ತದೆ. ನಾಡಾ ಗ್ರಾಮ ಜೋಯಿಸರಬೆಟ್ಟು, ವಕ್ಕೇರಿ ಹಾಗೂ ಬಡಾಕೆರೆ ಶಾಲೆ ಹಿಂಭಾಗದ ಪ್ರದೇಶದಲ್ಲಿ ಮರಳು ಗಣಿ ನಡೆಯಸುತ್ತಿರುವುದು ಪಕ್ಕಾ ಆಗಿದ್ದು, ಹೊಳೆಗೆ ತುಂಬಿದ ಮಣ್ಣು ತೆರವು ಮಾಡಲಾಗಿದೆ. ಹಾಗೂ ಟ್ರಂಚ್ ಮಾಡಿ ಮರಳು ತೆಗೆಯುವ ಪ್ರಯತ್ನಕ್ಕೆ ತಡೆ ನೀಡುವ ಪ್ರಯತ್ನ ಮಾಡಲಾಗಿದೆ. ಟ್ರಂಚ್ ಮಾಡಿದ ಜಾಗದಲ್ಲಿ ಮರಳು ತೆಗೆಯಲು ಮತ್ತೆ ಆರಂಭಿಸಿದರೆ, ಕಾನೂನು ರೀತಿ ಜಾಗದ ಓನರ್ ಹಾಗೂ ಮರಳು ತೆಗೆಯುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ.
– ಕಿರಣ್ ಜಿ.ಗೌರಯ್ಯ, ವಿಶೇಷ ತಹಸೀಲ್ದಾರ್, ಬೈಂದೂರು.

ಅತಿಕ್ರಮ ಮರಳು ತೆಗೆಯುವ ಪ್ರದೇಶದ ಮೇಲೆ ದಾಳಿ ನಡೆಸಲು ಬಂದ ಸಂದರ್ಭದಲ್ಲಿ ಮರಳು ಅಡ್ಡೆಗೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯ ಮೋಬೈಲ್ ಸೀಜ್ ಮಾಡಿ, ಗಂಗೊಳ್ಳಿ ಪೊಲೀಸರಿಗೆ ಒಪ್ಪಿಸಿ ತನಿಖೆ ಮಾಡುವಂತೆ ಸೂಚಿಸಲಾಗಿದೆ. ಮರಳು ತೆಗೆಯುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದರೆ, ಮರಳು ತೆಗೆಯುವ ಹಾಗೂ ಮರಳು ತೆಗೆಯಲು ಜಾಗದ ಅವಕಾಶ ಮಾಡಿಕೊಟ್ಟ ಜಾಗದ ಮಾಲೀಕರಿ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಟ್ರಂಚ್ ಮಾಡಿದ ಪರಿಸರದಲ್ಲಿ ಮತ್ತೆ ಗಣಿ ಆರಂಭಿಸಿದರೆ ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
– ಟಿ. ಭೂಬಾಲನ್, ಎಸಿ ಕುಂದಾಪುರ

Comments are closed.