ರಾಷ್ಟ್ರೀಯ

2018ರಲ್ಲಿ ಸಾವನ್ನಪ್ಪಿದ 18 ಪ್ರಮುಖರಿವರು

Pinterest LinkedIn Tumblr


ಹಿರಿಯ ನಟ ಕಾಶಿನಾಥ್ (ಜನವರಿ 18)
ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ನೀಡಿದ ನಿರ್ದೇಶಕ ಕಾಶಿನಾಥ್​ ಜನವರಿ 18ರಂದು ವಿಧಿವಶರಾದರು. ಕ್ಯಾನ್ಸರ್​ ರೋಗದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅನುಭವ, ಅಪರಿಚಿತ, ಅನಂತನ ಅವಾಂತರ, ಮೀಸೆ ಹೊತ್ತ ಗಂಡಸಿಗೆ ಡಿಮ್ಯಂಡಪ್ಪೋ ಡಿಮ್ಯಾಂಡು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಕಾಶಿನಾಥ್​ ನಟನಾಗಿಯೂ ಹೆಸರು ಮಾಡಿದವರು. ಕುಂದಾಪುರದಲ್ಲಿ ಹುಟ್ಟಿದ ಅವರು ಬಳಿಕ, ಚಿತ್ರರಂಗದ ಸೆಳೆತದಿಂದ ಬೆಂಗಳೂರಿನತ್ತ ಪಯಣ ಬೆಳೆಸಿದ್ದರು. ಉಪೇಂದ್ರ, ವಿ. ಮನೋಹರ್, ಸುನಿಲ್ ಕುಮಾರ್ ದೇಸಾಯಿ ಮುಂತಾದ ಖ್ಯಾತ ನಿರ್ದೇಶಕರು ಕಾಶಿನಾಥ್​ ಅವರ ಗರಡಿಯಲ್ಲೇ ಪಳಗಿದವರು. ನಟನೆ, ನಿರ್ದೇಶನ, ಸಂಗೀತ ನಿರ್ದೇಶನ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದ ಕಾಶಿನಾಥ್​ ನಟನೆಯ ಕೊನೆಯ ಸಿನಿಮಾ ಚೌಕ. ಈ ಸಿನಿಮಾದಲ್ಲಿ ಮಾನ್ವಿತಾ ಹರೀಶ್​ ಅವರ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾಶಿನಾಥ್​ ಅವರಿಗೆ ಈ ಸಿನಿಮಾ ಹೊಸ ಇಮೇಜ್​ ನೀಡಿತ್ತು.

ನಟ ಚಂದ್ರಶೇಖರ್ (ಜನವರಿ 27)

‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ನಟ ಚಂದ್ರಶೇಖರ್​ ಜನವರಿ 27ರಂದು ಕೆನಡಾದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಬಾಲ ನಟರಾಗಿ ಚಿತ್ರರಂಗ ಪ್ರವೇಶಿಸಿದ ಅವರು ಪಡುವಾರಳ್ಳಿ ಪಾಂಡವರು, ವಂಶವೃಕ್ಷ, ರಾಜ ನನ್ನ ರಾಜ, ಶಿವಲಿಂಗ, ಅಸ್ತಿತ್ವ, ರೋಸ್, ಕಾರಂಜಿ, ಜೀವ, ಪೂರ್ವಾಪರ, ಮಳೆ ಬಂತು ಮಳೆ, ಮಾನಸ ಸರೋವರ ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಚಂದ್ರಶೇಖರ್ ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರ. ಡಾ. ರಾಜ್​ಕುಮಾರ್​ ಅವರ ಜೊತೆ ‘ರಾಜ ನನ್ನ ರಾಜ’ ಚಿತ್ರದಲ್ಲಿ ಚಂದ್ರಶೇಖರ್​ ನಟಿಸಿದ್ದರು. ಜನವರಿಯಲ್ಲಿ ತೆರೆಕಂಡ ‘3 ಗಂಟೆ 30 ದಿನ 30 ಸೆಕೆಂಡ್’ ಅವರು ನಟಿಸಿದ ಕೊನೆಯ ಸಿನಿಮಾ.

ಪುಟ್ಟಣ್ಣಯ್ಯ (ಫೆಬ್ರವರಿ 18)
ಕರ್ನಾಟಕದ ರೈತ ಮುಖಂಡರಲ್ಲಿ ಮುಂಚೂಣಿಯಲ್ಲಿರುವ ಪುಟ್ಟಣ್ಣಯ್ಯ ಫೆಬ್ರವರಿ 18ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ರಾಜಕೀಯದತ್ತಲೂ ಆಸಕ್ತಿ ತಳೆದಿದ್ದ ಪುಟ್ಟಣ್ಣಯ್ಯ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಹೋರಾಟದ ಮಾರ್ಗದಿಂದ ಬಂದ ಪುಟ್ಟಣ್ಣಯ್ಯ 1989ರಲ್ಲಿ ಮೊದಲ ಬಾರಿಗೆ ರೈತ ಸಂಘದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಳಿಕ, 1994ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ಕಾವೇರಿ ನೀರು, ಕಬ್ಬಿಗೆ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆ ಮುಂತಾದ ರೈತರ ಸಮಸ್ಯೆಗಳಿಗೆ ಗಟ್ಟಿ ಧ್ವನಿಯಾಗಿರುತ್ತಿದ್ದ ಪುಟ್ಟಣ್ಣಯ್ಯ ಸದನ ಶೂರ ಎಂದೇ ಹೆಸರು ಪಡೆದವರು.

ನಟಿ ಶ್ರೀದೇವಿ (ಫೆಬ್ರವರಿ 24)

ಸಂಬಂಧಿಯ ಮದುವೆಗೆಂದು ದುಬೈಗೆ ತೆರಳಿದ್ದ ಬಾಲಿವುಡ್​ ಎವರ್​ಗ್ರೀನ್​ ನಟಿ ಶ್ರೀದೇವಿ ಫೆಬ್ರವರಿ 24ರಂದು ಬಾತ್​ರೂಮಿನ ಬಾತ್​ಟಬ್​ನೊಳಗೆ ಮುಳುಗಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಮದುವೆ ಮುಗಿಸಿ ಮಗಳಿಗೆ ಶಾಪಿಂಗ್ ಮಾಡಲೆಂದು ಒಬ್ಬರೇ ದುಬೈನ ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ಶ್ರೀದೇವಿಗೆ ಸರ್ಪ್ರೈಸ್​ ನೀಡಲೆಂದು ಅವರ ಗಂಡ ಬೋನಿ ಕಪೂರ್​ ಇದ್ದಕ್ಕಿದ್ದಂತೆ ದುಬೈಗೆ ತೆರಳಿದ್ದರು. ಗಂಡ ಬಂದ ಖುಷಿಯಲ್ಲಿ ಮಾತನಾಡುತ್ತಾ ಕುಳಿತಿದ್ದ ಶ್ರೀದೇವಿ ರಾತ್ರಿ ಊಟಕ್ಕೆ ಹೊರಗೆ ಹೋಗಲೆಂದು ರೆಡಿಯಾಗಿ ಬರಲು ಬಾತ್​ರೂಮಿಗೆ ಹೋದವರು ಹೊರಬರಲೇ ಇಲ್ಲ. ಒಳಗಿನಿಂದ ಯಾವ ಶಬ್ದವೂ ಬಾರದ ಹಿನ್ನೆಲೆಯಲ್ಲಿ ಬಾತ್​ರೂಮಿನ ಬಾಗಿಲು ತೆಗೆದು ನೋಡಿದ ಬೋನಿ ಕಪೂರ್​ಗೆ ಬಾತ್​ ಟಬ್​ನಲ್ಲಿ ಮುಳುಗಿದ್ದ ಶ್ರೀದೇವಿಯ ದೇಹ ಕಂಡಿತ್ತು. ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿತ್ತು. ಆದರೆ, ಯಾವುದಕ್ಕೂ ಸರಿಯಾದ ಸಾಕ್ಷಿಗಳು ಸಿಗದ ಕಾರಣದಿಂದ ಅದು ಆಕಸ್ಮಿಕ ಸಾವು ಎಂದು ದಾಖಲಾಯಿತು. ಮಗಳು ಜಾಹ್ನವಿಯ ಮೊದಲ ಸಿನಿಮಾವನ್ನು ನೋಡಬೇಕೆಂದು ಬಹಳ ಕನಸು ಕಂಡಿದ್ದ ಶ್ರೀದೇವಿಯ ಆಸೆ ಕೊನೆಗೂ ಈಡೇರಲೇ ಇಲ್ಲ.

ಶಾಸಕ ಬಿ.ಎನ್​. ವಿಜಯ್​ಕುಮಾರ್ (ಮೇ 4)

ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದು ರಾಜ್ಯ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡ ಬಿ.ಎನ್. ವಿಜಯ್​ ಕುಮಾರ್ ಚುನಾವಣಾ ಪ್ರಚಾರದ ವೇಳೆಯಲ್ಲೇ ಕುಸಿದುಬಿದ್ದು ಮೇ 4ರಂದು ಸಾವನ್ನಪ್ಪಿದರು. ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ವಿಜಯ್​ ಕುಮಾರ್​ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವಾಗಲೇ ಸಾವನ್ನಪ್ಪಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಚುನಾವಣೆ ಮುಂದೂಡಿಕೆಯಾಗಿತ್ತು. ಕುಟುಂಬ, ಮನೆ ಎಲ್ಲವನ್ನೂ ತ್ಯಜಿಸಿ, ಮದುವೆಯೂ ಆಗದೆ ಬ್ರಹ್ಮಚಾರಿಯಾಗಿ ಉಳಿದಿದ್ದ ವಿಜಯ್​ ಕುಮಾರ್ ಸ್ವಯಂಸೇವಾ ಸಂಘದ ಹಿನ್ನೆಲೆಯಲ್ಲಿ ಬಂದ ಶಿಸ್ತಿನ ರಾಜಕಾರಣಿ ಎಂದೇ ಹೆಸರಾಗಿದ್ದವರು.

ಶಾಸಕ ಸಿದ್ದು ನ್ಯಾಮಗೌಡ (ಮೇ 28)

ಮೇ 28ರಂದು ಬೆಳಗಿನ ಜಾವ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಸಾವನ್ನಪ್ಪಿದ್ದರು. 70 ವರ್ಷದ ಸಿದ್ದು ನ್ಯಾಮಗೌಡ ಅವರ ಎದೆಗೆ ಗಂಭೀರ ಗಾಯವಾಗಿದ್ದರಿಂದ ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ರಾಜಕಾರಣಿಯಾಗಿದ್ದ ಸಿದ್ದು ನ್ಯಾಮಗೌಡರ್​ ‘ಬ್ಯಾರೇಜ್​ ಸಿದ್ದು’ ಎಂದೇ ಆ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದರು. 1983ರಲ್ಲಿ ಕೃಷ್ಣಾ ನದಿಗೆ ಬ್ಯಾರೇಜ್​ ನಿರ್ಮಿಸುವಂತೆ ಜನತಾ ಪಕ್ಷದ ಸರ್ಕಾರವನ್ನು ಕೋರಿದ್ದರು. ಆದರೆ, ಸರ್ಕಾರ ಅದಕ್ಕೆ ಒಪ್ಪಿರಲಿಲ್ಲ. ಆಗ ಸ್ವತಃ ನೇತೃತ್ವ ವಹಿಸಿಕೊಂಡು ಸ್ಥಳೀಯರಿಂದಲೇ ಕೆಲಸ ಮಾಡಿಸಿ, ಜನರ ಸಾಮರ್ಥ್ಯ ಹಾಗೂ ತನ್ನ ಹಠ ಏನೆಂಬುದನ್ನು ತೋರಿಸಿದ್ದರು. ವಿಜಯಪುರ ಜಿಲ್ಲೆಯ ಚಿಕ್ಕಪಡಸಲಗಿಯಲ್ಲಿ ಕೃಷ್ಣಾ ನದಿಗೆ ಅಡ್ಡವಾಗಿ ಬ್ಯಾರೇಜ್​ ನಿರ್ಮಿಸಿ ಅಲ್ಲಿನ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಸಾವಿರಾರು ಎಕರೆ ಒಣಭೂಮಿಗೆ ನೀರು ಹರಿಸುವಂತೆ ಮಾಡಿದ ಸಹಕಾರಿ ಕ್ಷೇತ್ರದ ಧುರೀಣ ಸಿದ್ದು ನ್ಯಾಮಗೌಡ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (ಜೂನ್ 11)

ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಮಾಜಿ ಪ್ರಧಾನಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ಜೂನ್​ 11ರಂದು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. 93 ವಯಸ್ಸಿನ ಅಜಾತಶತ್ರು ವಾಜಪೇಯಿ ಆಗಸ್ಟ್​​ 16ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ವಾಜಪೇಯಿ ಅವರ ಸಾಕುಮಗಳು ನಮಿತಾ ಭಟ್ಟಾಚಾರ್ಯ ತನ್ನ ತಂದೆಯ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಪೂರೈಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದರು. ಪ್ರಖರ ವಾಗ್ಮಿಯಾಗಿದ್ದ ವಾಜಪೇಯಿ ಅವರು ಭಾಷಣಕ್ಕಾಗಿ ವಿರೋಧ ಪಕ್ಷದವರು ಕೂಡ ಕಾಯುತ್ತಿದ್ದರು. 3 ಬಾರಿ ಭಾರತದ ಪ್ರಧಾನಮಂತ್ರಿಯಾಗಿದ್ದ ವಾಜಪೇಯಿ ಕವಿಯೂ ಹೌದು. ಹಾಗಾಗಿ, ಅವರ ಭಾಷಣದಲ್ಲಿ ಅವರೊಳಗಿನ ಕವಿಯ ವ್ಯಕ್ತಿತ್ವ ಆಗಾಗ ಅನಾವರಣಗೊಳ್ಳುತ್ತಿತ್ತು.

ಶಿರೂರು ಶ್ರೀಗಳು (ಜುಲೈ 19)

ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಜುಲೈ 19ರಂದು ನಿಗೂಢವಾಗಿ ಸಾವನ್ನಪ್ಪಿದ್ದರು. ವಿಷಪ್ರಾಶನದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂಬ ಅನುಮಾನಗಳು ಬಂದ ನಂತರ ಆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಅವರ ಸಾವಿನ ವಿಚಾರಣೆ ವೇಳೆ ಅವರ ಖಾಸಗಿ ವಿಚಾರಗಳೂ ಬಯಲಿಗೆ ಬಂದಿದ್ದವು.

ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ (ಆಗಸ್ಟ್ 9)

ತಮಿಳುನಾಡು ಮಾತ್ರವಲ್ಲದೆ ಇಡೀ ದೇಶ ಕಂಡ ಅಪರೂಪದ ರಾಜಕಾರಣಿ ಎಂ. ಕರುಣಾನಿಧಿ ಆಗಸ್ಟ್​ 9ರಂದು ಕೊನೆಯುಸಿರೆಳೆದರು. 94 ವರ್ಷ ವಯಸ್ಸಾಗಿದ್ದ ಅವರು ತಮ್ಮ ಕೊನೆಯ ದಿನಗಳವರೆಗೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ತಮಿಳಿಗರ ಆರಾಧ್ಯ ದೈವ ಎಂದೇ ಬಿಂಬಿತವಾಗಿದ್ದ ಕರುಣಾನಿಧಿ ರಾಜಕೀಯ ಜೀವನ ಬಹಳ ವೈವಿಧ್ಯಮಯವಾದುದು. ಬಡತನದ ಹಿನ್ನೆಲೆಯಿಂದ ಬೆಳೆದುಬಂದ ಕರುಣಾನಿಧಿ ಬಳಿಕ ಇಡೀ ದೇಶವೇ ಅಚ್ಚರಿಯಿಂದ ನೋಡುವ ರಾಜಕಾರಣಿಯಾಗಿ ಬೆಳೆದರು. ಡಿಎಂಕೆ ಪಕ್ಷದ ಸ್ಥಾಪಕ ಸದಸ್ಯರಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದ ಕರುಣಾನಿಧಿ ರಾಜಕೀಯ ಮಾತ್ರವಲ್ಲದೆ ಸಿನಿಮಾರಂಗದಲ್ಲೂ ಬರಹಗಾರರಾಗಿ ಹೆಸರು ಮಾಡಿದವರು. ಬಳಿಕ, ತಮಿಳುನಾಡು ಸಿಎಂ ಗಾದಿಗಾಗಿ ಜಯಲಲಿತಾ ಹಾಗೂ ಕರುಣಾನಿಧಿ ನಡುವೆ ಸ್ಪರ್ಧೆ ಏರ್ಪಟ್ಟಿತು. ಆದರೂ ಕೊನೆಯವರೆಗೂ ಪಕ್ಷದಲ್ಲಿ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕರುಣಾನಿಧಿ ಹೆಸರಿಗೆ ಬಹಳ ತೂಕವಿರುತ್ತಿತ್ತು.

ಹಿರಿಯ ನಟ ನಂದಮೂರಿ ಹರಿಕೃಷ್ಣ (ಆಗಸ್ಟ್ 29)

ಆಂಧ್ರಪ್ರದೇಶದ ನಲ್ಗೊಂಡದ ಹೆದ್ದಾರಿಯಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಆಗಸ್ಟ್​ 29ರಂದು ತೆಲುಗಿನ ಖ್ಯಾತ ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವಿಪರ್ಯಾಸವೆಂದರೆ ಅವರ ಹಿರಿಯ ಮಗ ನಂದಮೂರಿ ಜಾನಕಿರಾಮ್​ ಕೂಡ ಇದೇ ನಲ್ಗೊಂಡದ ಹೆದ್ದಾರಿಯಲ್ಲೇ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಾಲಿವುಡ್​ನ ಖ್ಯಾತ ನಟರಾಗಿದ್ದ ದಿವಂಗತ ನಂದಮೂರಿ ತಾರಕ ರಾಮರಾವ್​ (ಎನ್​ಟಿಆರ್​) ಅವರ ಮಗನಾಗಿದ್ದ ನಂದಮೂರಿ ಹರಿಕೃಷ್ಣ ಸಿನಿಮಾ ರಂಗದಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ರಾಜಕೀಯದತ್ತ ವಾಲಿದ್ದರು. ಅವರಿಗೆ ಮೊದಲ ಹೆಂಡತಿಯಿಂದ ಜಾನಕಿರಾಮ್​, ಕಲ್ಯಾಣರಾಮ್, ಸುಹಾಸಿನಿ ಎಂಬ ಮಕ್ಕಳಿದ್ದಾರೆ. ಅವರ 2ನೇ ಹೆಂಡತಿಯ ಮಗ ಜೂನಿಯರ್​ ಎನ್​ಟಿಆರ್​ ಟಾಲಿವುಡ್​ನ ಖ್ಯಾತ ನಟ.

ವಯಲಿನ್ ವಾದಕ ಬಾಲಭಾಸ್ಕರ್ (ಅಕ್ಟೋಬರ್ 2)

ಮಲೆಯಾಳಂ ಸಂಗೀತ ನಿರ್ದೇಶಕ ಹಾಗೂ ಖ್ಯಾತ ವಯಲಿನ್ ವಾದಕ ಬಾಲ ಭಾಸ್ಕರ್​ ಅಕ್ಟೋಬರ್​ 2ರಂದು ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಕೇವಲ 40 ವರ್ಷ ವಯಸ್ಸಾಗಿದ್ದ ಅವರು ಸೆಪ್ಟೆಂಬರ್​ 25ರಂದು ತಮ್ಮ ಹೆಂಡತಿ ಮತ್ತು 2 ವರ್ಷದ ಮಗುವಿನ ಜೊತೆಗೆ ತಿರುವನಂತಪುರದ ಬಳಿ ಕಾರಿನಲ್ಲಿ ಹೋಗುವಾಗ ಕಾರು ಅಪಘಾತವಾಗಿತ್ತು. ಘಟನೆಯಲ್ಲಿ ಅವರ ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು. ಬಾಲ ಭಾಸ್ಕರ್​ ಮತ್ತು ಅವರ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೋಮಾಗೆ ಜಾರಿದ್ದರು. ತಮ್ಮ ಬಹುಕಾಲದ ಗೆಳತಿ ಲಕ್ಷ್ಮಿಯೊಂದಿಗೆ ವಿವಾಹವಾಗಿದ್ದ ಬಾಲಭಾಸ್ಕರ್​ ಸಂಗೀತ ಕ್ಷೇತ್ರದಲ್ಲೂ ಇತ್ತೀಚೆಗೆ ಸಾಧನೆಯ ಶಿಖರವನ್ನು ಏರುತ್ತಿದ್ದರು. 6 ವರ್ಷಗಳ ನಂತರ ಬಾಲಭಾಸ್ಕರ್​ ದಂಪತಿಗೆ ಮಗಳು ಹುಟ್ಟಿದ್ದಳು. ಸಂಗೀತ ಕ್ಷೇತ್ರದಲ್ಲಿ ಖ್ಯಾತಿ, ಮುದ್ದಾದ ಕುಟುಂಬದ ಜೊತೆಗೆ ಸಂತೃಪ್ತ ಜೀವನ ನಡೆಸುತ್ತಿದ್ದ ಬಾಲಭಾಸ್ಕರ್ ಹಾಗೂ ಅವರ ಮಗಳು ದುರಂತ ಅಂತ್ಯ ಕಂಡಿದ್ದಾರೆ. ಬಾಲಭಾಸ್ಕರ್ ಸಾವಿಗೆ ಖ್ಯಾತ ಗಾಯಕ ಶಂಕರ್ ಮಹದೇವನ್​, ಮಲೆಯಾಲಂ ನಟ ಮೋಹನ್​ ಲಾಲ್​ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದರು.

ಉಪಮೇಯರ್​ ರಮೀಳಾ (ಅಕ್ಟೋಬರ್​ 4)

ಬಿಬಿಎಂಪಿಯ ಉಪಮೇಯರ್ ಆಗಿ ಆಯ್ಕೆಯಾಗಿದ್ದ ರಮೀಳಾ ಉಮಾಶಂಕರ್ ಅಕ್ಟೋಬರ್​ 4ರಂದು ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಸಾವಿಗೂ ಒಂದು ವಾರದ ಹಿಂದಷ್ಟೇ ರಮೀಳಾ ಉಪಮೇಯರ್​ ಆಗಿ ಆಯ್ಕೆಯಾಗಿದ್ದರು. ಕಾವೇರಿಪುರಂ ವಾರ್ಡ್‌ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಮಿಳಾ ಗೆಲುವು ಸಾಧಿಸಿದ್ದರು.

ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ (ಅಕ್ಟೋಬರ್ 20)

ಗದಗದ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಕ್ಟೋಬರ್ 20ರಂದು ಕೊನೆಯುಸಿರೆಳೆದರು. ಲಿಂಗಾಯತ ಸಮುದಾಯದ ಮಠಾಧೀಶರಾಗಿದ್ದ ಸ್ವಾಮೀಜಿ ಹೃದಯಾಘಾತದಿಂದ ಲಿಂಗೈಕ್ಯರಾದರು. ಶಿಕ್ಷಣ ದಾಸೋಹದಲ್ಲಿ ಕ್ರಾಂತಿ ಮಾಡಿದ್ದ ಡಾ. ಸಿದ್ಧಲಿಂಗ ಸ್ವಾಮೀಜಿ ವಿಜಯಪುರ ಮೂಲದವರು. ಅಂಗನವಾಡಿಯಿಂದ ಸ್ನಾತಕೋತ್ತರ ಪದವಿಯವರೆಗೆ 80ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಮೂಲಕ ಶಿಕ್ಷಣ ದಾಸೋಹ ನಡೆಸಿದವರು. ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ಡಾ. ಸಿದ್ಧರಾಮ ಸ್ವಾಮೀಜಿ ಅಧಿಕಾರ ವಹಿಸಿಕೊಂಡರು.

ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ (ನವೆಂಬರ್ 12)

ರಾಜ್ಯದ ಜನಪ್ರಿಯ ರಾಜಕಾರಣಿ ಅನಂತ್​ಕುಮಾರ್​ ಕೇಂದ್ರದ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾಗಲೇ ಸಾವನ್ನಪ್ಪಿದರು. ಸತತ 6 ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅನಂತ್​ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅನಂತ್​ಕುಮಾರ್​ ಲಂಡನ್​ಗೆ ಹೋಗಿ ಚಿಕಿತ್ಸೆ ಪಡೆದುಬಂದಿದ್ದರು. ಬಳಿಕ, ಬೆಂಗಳೂರಿನ ಶಂಕರ್​ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನಂತ್​ ಕುಮಾರ್​ ನವೆಂಬರ್​ 12ರಂದು ಕೊನೆಯುಸಿರೆಳೆದರು.

ನಟ ಅಂಬರೀಷ್ (ನವೆಂಬರ್ 24)

ಸ್ಯಾಂಡಲ್​ವುಡ್​ನ ಪ್ರಸಿದ್ಧ ನಟ ಹಾಗೂ ಮಾಜಿ ಸಚಿವ ಅಂಬರೀಷ್​ ನವೆಂಬರ್​ 24ರಂದು ಸಾವನ್ನಪ್ಪಿದರು. ಶ್ವಾಸಕೋಶ ಸಮಸ್ಯೆ ಸೇರಿದಂತೆ ಬಹು ಅಂಗ ವೈಫಲ್ಯದಿಂದ ಬಳಲುತ್ತಿದ್ದ ಅಂಬರೀಷ್​ ಹೃದಯಾಘಾತದಿಂದ ಕೊನೆಯುಸಿರೆಳೆದರು. ವಿಷ್ಣುವರ್ಧನ್​, ರಾಜ್​ಕುಮಾರ್​ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ನಟರ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದ ಅಂಬರೀಷ್​ ಅಭಿನಯದ ಕೊನೆಯ ಸಿನಿಮಾ ‘ಅಂಬಿ ನಿಂಗ್​ ವಯಸ್ಸಾಯ್ತೋ’ ಸೆಪ್ಟೆಂಬರ್​ನಲ್ಲಿ ತೆರೆಕಂಡಿತ್ತು. ಅವರು ಅಭಿನಯಿಸಿದ ‘ಕುರುಕ್ಷೇತ್ರ’ ಸಿನಿಮಾ ತೆರೆ ಕಾಣಬೇಕಿದೆ. ಸುಮಲತಾ ಅಂಬರೀಷ್​ ಜೊತೆಗೆ 27 ವರ್ಷ ದಾಂಪತ್ಯ ಜೀವನ ನಡೆಸಿದ್ದ ಅಂಬರೀಷ್​ ಕನ್ನಡ ಚಿತ್ರರಂಗದಲ್ಲಿ ಅಥವಾ ಕಲಾವಿದರ ಜೀವನದಲ್ಲಿ ಯಾವುದೇ ಮನಸ್ತಾಪ, ಸಮಸ್ಯೆಗಳು ಎದುರಾದರೂ ಬಗೆಹರಿಸಲು ಮುಂದಾಗುತ್ತಿದ್ದರು. ಕನ್ನಡ ಚಿತ್ರರಂಗದ ಮಟ್ಟಿಗೆ ಅಂಬರೀಷ್​ ನ್ಯಾಯಾಲಯದಂತೆ ಇದ್ದರು. ದರ್ಶನ್​ ಕೌಟುಂಬಿಕ ಸಮಸ್ಯೆ, ಸುದೀಪ್​- ಪ್ರಿಯಾ ಮನಸ್ತಾಪ, ದುನಿಯಾ ವಿಜಯ್​ ವಿಷಯ ಸೇರಿದಂತೆ ಇತ್ತೀಚೆಗೆ ಅರ್ಜುನ್​ ಸರ್ಜಾ- ಶ್ರುತಿ ಹರಿಹರನ್ ವಿವಾದದಲ್ಲೂ ಅಂಬರೀಷ್​ ಸಂಧಾನ ಕಾರ್ಯ ನಡೆಸಿದ್ದರು. ಆದರೆ, ಅರ್ಜುನ್​- ಶ್ರುತಿ ವಿವಾದ ಅಂಬಿ ಅಂಗಳದಲ್ಲೂ ಬಗೆಹರಿದಿರಲಿಲ್ಲ.

ಸಿ.ಕೆ. ಜಾಫರ್​ ಷರೀಫ್ (ನವೆಂಬರ್ 25)

ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್​ ಷರೀಫ್​ ನವೆಂಬರ್​ 25ರಂದು ನಿಧನರಾದರು. 85 ವರ್ಷ ವಯಸ್ಸಾಗಿದ್ದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂಡಿಯ ವಿನ್ಸ್​ ಫ್ರೀಡಂ ಎಂಬ ಕೃತಿಯ ಉರ್ದು ಅನುವಾದ ಮಾಡಿದ್ದ ಅವರ ಪುಸ್ತಕ ಬಿಡುಗಡೆ ಸಮಾರಂಭ ನವೆಂಬರ್​ 28ರಂದು ಆಯೋಜನೆಗೊಂಡಿತ್ತು. ಆದರೆ, ನವೆಂಬರ್​ 25ರಂದು ನಮಾಜ್​ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ್ದ ಅವರು ಪಿ.ವಿ. ನರಸಿಂಹರಾವ್​ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದರು. 7 ಬಾರಿ ಸಂಸದರಾಗಿದ್ದ ಜಾಫರ್​ ಷರೀಫ್ 2004ರಲ್ಲಿ ಸೋತ ನಂತರ ರಾಜಕೀಯದಿಂದ ತೆರೆಮರೆಗೆ ಸರಿದಿದ್ದರು. ಪಕ್ಷನಿಷ್ಠೆಗೆ ಹೆಸರಾಗಿದ್ದ ಅವರು ಕಾಂಗ್ರೆಸ್​ ಹೈಕಮಾಂಡ್​ನಲ್ಲಿ ಪ್ರಭಾವಿ ಮುಖಂಡರಾಗಿದ್ದರು. ಅವರ ಮಗ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಸಕ್ರಿಯ ರಾಜಕಾರಣದಿಂದ ಕೊಂಚ ಹಿಂದೆ ಸರಿದಿದ್ದರು.

ಪತ್ರಕರ್ತ ರಾಧಾಕೃಷ್ಣನ್​ ನಾಯರ್ (ನವೆಂಬರ್ 27)

ಸಿಎನ್​ಎನ್​- ನ್ಯೂಸ್​18 ಸಂಸ್ಥೆಯ ಮ್ಯಾನೇಜಿಂಗ್​ ಎಡಿಟರ್​ ರಾಧಾಕೃಷ್ಣನ್​ ನಾಯರ್​ ನವೆಂಬರ್​ 27ರಂದು ನಿಧನರಾದರು. ಕೇರಳ ಮೂಲದ ರಾಧಾಕೃಷ್ಣನ್ ನಾಯರ್ ಅತ್ಯಂತ ಸಣ್ಣ ವಯಸ್ಸಿನಲ್ಲೇ ಪತ್ರಿಕೋದ್ಯಮದ ಉನ್ನತ ಹುದ್ದೆಯನ್ನು ಏರಿದವರು. ರಾಷ್ಟ್ರದ ರಾಜಕಾರಣಿಗಳು, ಗಣ್ಯರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಅವರು ಅತ್ಯುತ್ತಮ ಪತ್ರಕರ್ತ ಎಂಬ ಹೆಗ್ಗಳಿಕೆ ಗಳಿಸಿದ್ದರು. ಯುಎನ್​ಐನಲ್ಲಿ ಕೆಲಸ ಆರಂಭಿಸಿದ್ದ ರಾಧಾಕೃಷ್ಣನ್​ ಬಳಿಕ, ದೆಹಲಿಯಲ್ಲಿ ಹಲವು ಚಾನೆಲ್​ಗಳಲ್ಲಿ ಉನ್ನತ ಹುದ್ದೆಗಳನ್ನು ಏರಿದ್ದರು.

ಸೂಲಗಿತ್ತಿ ನರಸಮ್ಮ (ಡಿಸೆಂಬರ್ 26)
ಪದ್ರಶ್ರೀ ಪ್ರಶಸ್ತಿ ಪುರಸ್ಕೃತೆ, ಸಹಜ ಹೆರಿಗೆ ಮೂಲಕ ಸಾವಿರಾರು ಮಕ್ಕಳಿಗೆ ತಾಯಿಯಾದ ಸೂಲಗಿತ್ತಿ ನರಸಮ್ಮ ಜನವರಿ 26ರಂದು ಸಾವನ್ನಪ್ಪಿದರು. ತುಮಕೂರಿನ ಗಂಗಸಂದ್ರದಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಡನೆ ನರಸಮ್ಮನವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ವಯೋಸಹಜ ಅನಾರೋಗ್ಯದ ಕಾರಣ ನರಸಮ್ಮ (98) ಮಂಗಳವಾರ ವಿಧಿವಶರಾಗಿದ್ದರು. ವೈದ್ಯಕೀಯ ನೆರವಿನ ಅಗತ್ಯವಿಲ್ಲದೆ ಸಾವಿರಾರು ಜನರಿಗೆ ಸಹಜ ಹೆರಿಗೆಯನ್ನು ಮಾಡಿಸುವ ಮೂಲಕ ಹಲವು ಮಹಿಳೆಯರ, ಮಕ್ಕಳ ಪಾಲಿಗೆ ತಾಯಿಯಂತಿದ್ದ ನರಸಮ್ಮನವರಿಗೆ 2018ನೇ ಸಾಲಿನಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು.

Comments are closed.