ಕರ್ನಾಟಕ

ಮೈಯೆಲ್ಲಾ ಎಣ್ಣೆ ಸವರಿಕೊಂಡು ಪೆಟ್ರೋಲ್ ಬಂಕ್ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ

Pinterest LinkedIn Tumblr


ಹಾಸನ: ಬೆಳಗ್ಗೆಯಿಂದ ಸಂಜೆಯವರೆಗೆ ಆಟೋ ಓಡಿಸಿಕೊಂಡು, ಗ್ಯಾರೇಜ್​ನಲ್ಲಿ ಕೆಲಸ ಮಾಡಿಕೊಂಡು, ಅಂಗಡಿ ವ್ಯಾಪಾರ ಮಾಡಿಕೊಂಡು ಸಮಾಜದಲ್ಲಿ ಪ್ರಾಮಾಣಿಕರ ರೀತಿ ಮುಖವಾಡ ಇಟ್ಟುಕೊಂಡಿದ್ದ ಖದೀಮರ ಗ್ಯಾಂಗೊಂದು ರಾತ್ರಿಯಾಯ್ತೆಂದರೆ ಮಾರಕ ಆಟ ಶುರು ಮಾಡುತ್ತಿತ್ತು. ಈ ಖದೀಮರು ಮೈಗೆ ಎಣ್ಣೆ ತಿಕ್ಕಿಕೊಂಡು ಕೈನಲ್ಲಿ ಲಾಂಗ್ ಹಿಡಿದು ರಾತ್ರಿ ಹೊತ್ತು ಫೀಲ್ಡ್​ಗೆ ಇಳಿಯುತ್ತಿದ್ದರು. ಜನಸಂದಣಿ ಕಡಿಮೆ ಇರುವ ಪೆಟ್ರೋಲ್ ಬಂಕ್​ಗಳ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳರು, ನಿರಾಯಾಸವಾಗಿ ಹಣ ದೋಚಿ ಪರಾರಿಯಾಗುತ್ತಿದ್ದರು.

ಕಳೆದ ನವೆಂಬರ್ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೀರಿಸಾವೆ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಶ್ರೀ ಲಕ್ಷ್ಮೀ ರಂಗನಾಥ್ ಪೆಟ್ರೋಲ್ ಬಂಕ್​ಗೆ ನುಗ್ಗಿದ್ದ ಖದೀಮರು, ಲಾಂಗು ಮಚ್ಚು ತೋರಿಸಿ 2.2 ಲಕ್ಷ ಹಣ ದೋಚಿ ಪರಾರಿ ಆಗಿದ್ದರು.

ಕಳ್ಳರ ಕೈ ಚಳಕದ ಕೃತ್ಯ ಸಿಸಿ ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿತ್ತು. ಪೊಲೀಸರು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು. ಅದೇ ರೀತಿ ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಒಟ್ಟು 12 ಕಡೆ ದರೋಡೆ ಮಾಡಿದ್ದ ಖದೀಮರು, ಡಿಸೆಂಬರ್ 3 ರಂದು ರಾಮನಗರದ ಬಿಡದಿಯಲ್ಲಿ ದರೋಡೆಗೆ ಯತ್ನಿಸಿ ರಾಮನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಒಟ್ಟು 9 ಮಂದಿಯ ಈ ಗ್ಯಾಂಗನ್ನ ಮಂಡ್ಯದ ಮಾರಸಹಳ್ಳಿ ಯೋಗಾನಂದ ಎಂಬಾತ ಲೀಡ್ ಮಾಡುತ್ತಿದ್ದ ಎಂಬುವುದು ತನಿಖೆಯಿಂದ ತಿಳಿದುಬಂದಿದ್ದು, ಮೂರು ಅಥವಾ ನಾಲ್ಕು ಮಂದಿ ಟೀಮ್ ಮಾಡಿಕೊಂಡು ದರೋಡೆಗೆ ಇಳಿಯುತ್ತಿದ್ದರು ಎನ್ನಲಾಗಿದೆ.

ಇದೇ ಗ್ಯಾಂಗ್ ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಲ್ಲದೇ, ಬೆಂಗಳೂರು ಮೂಲದ ಪಾರಿಜಾತ ರವಿ ಎಂಬುವವನ ಕೊಲೆಗೆ ಸ್ಕೆಚ್ ಹಾಕಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಒಟ್ಟಾರೆ ದರೋಡೆಗೆ ಬಳಸುತ್ತಿದ್ದ ವಾಹನಗಳು ಹಾಗೂ ಆಯುಧಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಭಯವನ್ನೇ ಬಂಡವಾಳ ಮಾಡಿಕೊಂಡು ದರೋಡೆಗೆ ಮಾಡುತ್ತಿದ್ದ ಖದೀಮರಿಗೆ ಚಳಿ ಬಿಡಿಸಿ ಜೈಲಿಗಟ್ಟಿದ್ದಾರೆ.

Comments are closed.