ರಾಷ್ಟ್ರೀಯ

ಶಬರಿಮಲೆ ದೇಗುಲ ಪ್ರವೇಶ ಮಾಡಲು ಯತ್ನಿಸಿದ 11 ಮಹಿಳೆಯರನ್ನು ಘೇರಾವ್ ಹಾಕಿ ತಡೆದ ಭಕ್ತರು

Pinterest LinkedIn Tumblr

ಪಂಪಾ: ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮಾಡಲು ಪ್ರಯತ್ನಿಸಿದ 11 ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆದಿದ್ದು, ಪಂಪಾ ಬೇಸ್ ಕ್ಯಾಂಪ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರಸ್ತುತ ಪೊಲೀಸ್ ಭದ್ರತೆಯಲ್ಲಿ ಪಂಪಾ ಕ್ಯಾಂಪ್ ತಲುಪಿರುವ ಎಲ್ಲ 11 ಮಹಿಳೆಯರೂ 50 ವರ್ಷದೊಳಗಿನವರಾಗಿದ್ದು ದೇವಸ್ಥಾನ ಪ್ರವೇಶಕ್ಕೆ ಮುಂದಾಗಿದ್ದರು. ಪ್ರತಿಭಟನಾಕಾರರು ಅವರನ್ನೆಲ್ಲ ಅರ್ಧದಲ್ಲೇ ತಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಹಿಳೆಯರು ಮನಿಟಿ ಎಂಬ ಸಂಘಟನೆಗೆ ಸೇರಿದವರಾಗಿದ್ದು, ಪೊಲೀಸ್​ ಬಿಗಿ ಭದ್ರತೆಯಲ್ಲಿ ಶಬರಿಮಲೆಯನ್ನು ತಲುಪಿದ್ದರು. ಆದರೆ ಇವರನ್ನು ನೋಡಿದ ಪ್ರತಿಭಟನಾಕಾರರು ಪಂಪಾ ಶಿಬಿರದ ಬಳಿಯೇ ತಡೆದಿದ್ದಾರೆ.

ಈ ವೇಳೆ ಪೊಲೀಸರು ಮಹಿಳೆಯರಿಗೆ ಅಲ್ಲಿನ ಸ್ಥಿತಿ ವಿವರಿಸಲು ಯತ್ನಿಸಿದ್ದಾರೆ. ಇವ್ಯಾವುದನ್ನೂ ಕೇಳದ ಮಹಿಳೆಯರು ದೇವಸ್ಥಾನಕ್ಕೆ ಹೋಗಲೇಬೇಕು ಎಂದು ಹೇಳಿ ಮುಂದೆ ಹೊರಟಿದ್ದರು. ಇದನ್ನು ನೋಡಿದ ಭಕ್ತರು ಸೆಕ್ಷನ್​ 144 ಜಾರಿಯಲ್ಲಿದ್ದರೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಮುಂಜಾಗೃತಾ ಕ್ರಮವಾಗಿ ಬಸ್​ ಸಂಚಾರ ವ್ಯವಸ್ಥೆಯನ್ನು ಪೊಲೀಸರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಶಬರಿಮಲೆಯಲ್ಲಿ ವಾರ್ಷಿಕ ‘ಮಂಡಲ ಪೂಜೆ’ಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿಯೇ ದೇವಸ್ಥಾನದ ಆವರಣದಲ್ಲಿ ಆತಂಕದ ಸ್ಥೀತಿ ಬುಗಿಲೆದ್ದಿದೆ. ದೇಗುಲಕ್ಕೆ ಭೇಟಿ ನೀಡುವ ಕುರಿತು ಈಗಾಗಲೇ ಕೇರಳ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಸಂಘಟನೆಯ ಸದಸ್ಯೆ ಸೆಲ್ವಿ ಹೇಳಿದ್ದಾರೆ.

22-45 ವರ್ಷದವರೆಗಿನ ಸುಮಾರು 40 ಜನ ಸದಸ್ಯೆಯರು ಭಾನುವಾರ ಶಬರಿಮಲೆಗೆ ತೆರಳುತ್ತೇವೆ ಎಂದು ಚೆನ್ನೈ ಮೂಲದ ಮನಿಟಿ ಮಹಿಳಾ ಸಂಘಟನೆ ಶನಿವಾರವೇ ತಿಳಿಸಿತ್ತು. ನಾವೆಲ್ಲ ಸಂಪ್ರದಾಯಬದ್ಧವಾಗಿ ವ್ರತ ನಡೆಸಿದ್ದೇವೆ. ಇಲ್ಲಿಗೆ ಕಾರ್ಯಕರ್ತೆಯರಾಗಿ ಬಂದಿಲ್ಲ. ಯಾತ್ರಾರ್ಥಿಗಳಾಗಿ ಧಾವಿಸಿದ್ದೇವೆ. ದೇವಸ್ಥಾನದಲ್ಲಿ ಪೂಜೆ ನಡೆಸಬೇಕು. ಇದಕ್ಕಾಗಿ ನಮಗೆ ರಕ್ಷಣೆ ಬೇಕು ಎಂದು ಸಂಘಟನೆಯ ಎಲ್​.ವಸಂತಿ ತಿಳಿಸಿದ್ದರು.

ಶುಕ್ರವಾರ ಒಂದೇ ದಿನ 1,12,260 ಭಕ್ತಾದಿಗಳು ದರ್ಶನ ಪಡೆದುಕೊಂಡಿದ್ದು, ಈ ವರ್ಷದ ದಾಖಲೆಯಾಗಿದೆ. ಮುಂಬರುವ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

Comments are closed.