
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 31ನೇ ಪರಿಷತ್ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶನಿವಾರ ನಡೆದ ಸಭೆಯಲ್ಲಿ ಒಟ್ಟೂ 33 ವಸ್ತುಗಳ ತೆರಿಗೆಯನ್ನು ಶೇಕಡ 18ರಿಂದ ಶೇ. 12 ಮತ್ತು ಶೇ. 5ಕ್ಕೆ ಇಳಿಸಲು ಮುಂದಾಗಿದೆ. ಈ ಮೂಲಕ 33 ವಸ್ತುಗಳು ಮೊದಲಿಗಿಂತ ಕಡಿಮೆ ಬೆಲೆಗೆ ಸಿಗಲಿದ್ದು ಗ್ರಾಹಕರಿಗೆ ಸಂತಸ ತರಲಿದೆ.
ಜಿಎಸ್ಟಿ ಪರಿಷತ್ನ ನಿರ್ಧಾರವನ್ನು ಸಭೆಯ ನಂತರ ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ಆದರೆ 33 ವಸ್ತುಗಳ ಪಟ್ಟಿಯಲ್ಲಿ ಏನಿವೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸಂಜೆಯ ನಂತರ ಮಾಹಿತಿ ತಿಳಿಯುವ ಸಾಧ್ಯತೆಯಿದೆ.
“ಎಲ್ಲಾ ಅಗತ್ಯ ವಸ್ತುಗಳ ಮತ್ತು ಸೇವೆಗಳ ತೆರಿಗೆಯನ್ನು ಶೇಕಡ 18ಕ್ಕೆ ಇಳಿಸಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಕೇಂದ್ರ ಮುಂದಿರಿಸಿತ್ತು. ಐಷಾರಾಮಿ ವಸ್ತುಗಳನ್ನು ಹೊರತುಪಡಿಸಿ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ತೆರಿಗೆ ಕಡಿತಗೊಳಿಸಲು ಕೇಂದ್ರ ಒಪ್ಪಿಗೆ ಸೂಚಿಸಿದೆ. 34 ವಸ್ತುಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ವಸ್ತುಗಳ ತೆರಿಗೆ ಶೇಕಡ 18ಕ್ಕೆ ಇಳಿಕೆಯಾಗಲಿದೆ,” ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.
ಪಾಂಡಿಚೇರಿ ಹಣಕಾಸು ಸಚಿವರು ಕೂಡ ಏಳು ವಸ್ತುಗಳ ತೆರಿಗೆ ಶೇಕಡ 28ರಿಂದ ಶೇ. 18ಕ್ಕೆ ಇಳಿಕೆಯಾಗಿರುವುದಾಗಿ ಹೇಳಿದ್ದಾರೆ.
ಇದೇ ವಾರ ಪ್ರಧಾನಿ ನರೇಂದ್ರ ಮೋದಿ ಶೇಕಡ 99 ವಸ್ತುಗಳ ಜಿಎಸ್ಟಿ ಶೇಕಡ 18ಕ್ಕೆ ಇಳಿಕೆಯಾಗಲಿದೆ ಎಂಬ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಸಭೆ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿತ್ತು.
ಸುಮಾರು 1,200ಕ್ಕೂ ಹೆಚ್ಚು ಸರಕು ಮತ್ತು ಸೇವೆಗಳು ಶೇ. 5, 12, 18 ಮತ್ತು 28ರ ವರ್ಗಗಳಲ್ಲಿ ಒಳಗೊಂಡಿವೆ. ಸುಮಾರು 40 ಸರಕು ಮತ್ತು ಸೇವೆಗಳು ಶೇ. 28ರ ವರ್ಗದಲ್ಲಿದ್ದು ಬಹುತೇಕ ಐಷಾರಾಮಿ ವಸ್ತುಗಳೇ ಆಗಿವೆ.
ಈ ನಿರ್ಧಾರವನ್ನು ಅಧಿಕೃತವಾಗಿ ಕೇಂದ್ರ ಜಾರಿಗೊಳಿಸಿದರೆ 2019ರ ಲೋಕಸಭಾ ಚುನಾವಣಾ ದೃಷ್ಟಿಯಿಂದ ಮಧ್ಯಮ ವರ್ಗದ ಮತ ಕ್ರೋಢೀಕರಣಕ್ಕೆ ಕೇಂದ್ರ ಹೂಡಿದ ತಂತ್ರ ಎಂದೂ ಬಿಂಬಿತವಾಗಬಹುದು. ಆದರೆ ಸಾಮಾನ್ಯ ಜನರಿಗಂತೂ ಇದರಿಂದ ಸಹಾಯವಾಗುವುದು ನಿಶ್ಚಿತ.
Comments are closed.