ರಾಷ್ಟ್ರೀಯ

ಗರ್ಭಿಣಿ ಆತ್ಮಹತ್ಯೆ; ಕರುಳುಬಳ್ಳಿಗೆ ನೇತಾಡಿ ಬದುಕುಳಿದ ನವಜಾತ ಶಿಶು

Pinterest LinkedIn Tumblr


ಜಬಲ್​ಪುರ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಗರ್ಭಿಣಿಯ ಕಾಲಿನ ಬಳಿ ಕರುಳುಬಳ್ಳಿಯಲ್ಲಿ ನೇತಾಡುತ್ತಿದ್ದ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ.

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗರ್ಭಿಣಿ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ದನದ ಕೊಟ್ಟಿಗೆಯಲ್ಲಿ ಮೃತ ತಾಯಿಯ ಕಾಲಿನ ಬಳಿ ಅಳುತ್ತಿರುವ ನವಜಾತು ಶಿಶು ನೇತಾಡುತ್ತಿರುವ ದೃಶ್ಯ ಕಂಡು ಬಂದಿದೆ.

ತಕ್ಷಣ ಸಬ್​ ಇನ್​ಸ್ಪೆಕ್ಟರ್​ ಕವಿತಾ ಸಹಾನಿ, ಕರುಳ ಬಳ್ಳಿಯೊಂದಿಗೆ ಮಗುವಿಗೆ ಬಟ್ಟೆ ಸುತ್ತಿ ಆಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್​ನಲ್ಲಿ ಬಂದ ವೈದ್ಯಕೀಯ ಸಹಾಯಕರು ಮಗುವನ್ನು ಕಟ್ನಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಮಗುವನ್ನು ಆಸ್ಪತ್ರೆಗೆ ತಂದ ತಕ್ಷಣ ಮಕ್ಕಳ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಿ ತಪಾಸಣೆ ನಡೆಸಿದೆವು. ಮಗು ಬದುಕುಳಿಯುವ ಎಲ್ಲ ಸಾಧ್ಯತೆಗಳೂ ಇವೆ. ಎಂಟು ತಿಂಗಳು ಆಗಿದ್ದು, ಅವಧಿಗೂ ಮುಂಚೆ ಜನಿಸಿದ ಮಗುವಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮಗುವಿನ ತಾಯಿ ಲಕ್ಷ್ಮಿ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಕುಟುಂಬಸ್ಥರು ಆಕೆಯ ಅಂತ್ಯ ಸಂಸ್ಕಾರದಲ್ಲಿ ಕಾರ್ಯನಿರತಾದ್ದರಿಂದ ನಂತರ ವಿಚಾರಣೆ ನಡೆಸುತ್ತೇವೆ ಎಂದು ಎಎಸ್​​ಪಿ ಲಾಲ್​ ತಿಳಿಸಿದ್ದಾರೆ.

ಮೃತ ಲಕ್ಷ್ಮಿ ಪತಿ ಸಂತೋಷ್​ ಜತೆ ಯಾವುದೇ ಜಗಳ ಆಡಿರಲಿಲ್ಲ. ಬುಧವಾರ ರಾತ್ರಿ ಇಬ್ಬರೂ ಊಟ ಮಾಡಿ, ಟಿವಿ ನೋಡಿಕೊಂಡು 9 ಗಂಟೆ ಸುಮಾರಿಗೆ ಮಲಗಿದ್ದಾರೆ. ಮರುದಿನ 6 ಗಂಟೆಗೆ ಸಂತೋಷ್​ ಎದ್ದಾಗ ಪತ್ನಿ ಮನೆಯಲ್ಲಿರಲಿಲ್ಲ. ದನದ ಕೊಟ್ಟಿಗೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಲಕ್ಷ್ಮಿ, ಸಂತೋಷ್​ ರೈತರಾಗಿದ್ದು ತರಕಾರಿಗಳನ್ನು ಬೆಳೆದು, ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ದಂಪತಿಗೆ ನಾಲ್ಕು ಮಕ್ಕಳಿದ್ದು, ದೊಡ್ಡವಳಿಗೆ 16 ವರ್ಷವಾಗಿತ್ತು. ಜನಿಸಿರುವ ಗಂಡು ಮಗು ಐದನೆಯದ್ದಾಗಿದೆ ಎಂದು ತಿಳಿದು ಬಂದಿದೆ.

Comments are closed.