ರಾಷ್ಟ್ರೀಯ

ಕರ್ನಾಟಕದ ಮಾದರಿಯಲ್ಲೇ ಮಧ್ಯಪ್ರದೇಶ, ರಾಜಸ್ಥಾನ ಮುಖ್ಯಮಂತ್ರಿಗಳ ಪ್ರಮಾಣವಚನ

Pinterest LinkedIn Tumblr


ದೆಹಲಿ​: ವಿಪಕ್ಷ ನಾಯಕರು ಮತ್ತೆ ಒಂದಾಗಲು ಮಹಾಘಟಬಂದನ್‌ ವೇದಿಕೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿದ್ಧವಾಗುತ್ತಿದೆ.

ಘಟಬಂಧನದ ಮೊದಲ ವೇದಿಕೆ ಎಂದೇ ಹೇಳಲಾಗಿದ್ದ ಕರ್ನಾಟಕದ ಮಾದರಿಯದ್ದೇ ಸಮಾರಂಭವನ್ನು ಆಯೋಜಿಸಲು ಮಧ್ಯಪ್ರದೇಶ ಮತ್ತು ರಾಜಸ್ಥಾನ ಕಾಂಗ್ರೆಸ್​ ನಿರ್ಧರಿಸಿದೆ.

ಎಚ್​.ಡಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಿ ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕರಿಸಿದ್ದ ಸಮಾರಂಭ ಇಡೀ ದೇಶದಲ್ಲೇ ಭಾರಿ ಸದ್ದು ಮಾಡಿತ್ತು. ಘಟಬಂಧನ ಮಾಡಿಕೊಳ್ಳಬೇಕೆಂದು ಬಯಸಿದ್ದ ದೇಶದ ಪ್ರಾದೇಶಿಕ ಪಕ್ಷಗಳ ನಾಯಕರೂ ಸೇರಿ ಸೋನಿಯಾ ಹಾಗೂ ರಾಹುಲ್​ ಈ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿ ಸೇರಿದ್ದೇ ಇದಕ್ಕೆ ಕಾರಣ. ಈಗ ಮತ್ತೊಮ್ಮೆ ಅಂಥದ್ದೊಂದು ವೇದಿಕೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಿದ್ಧವಾಗುತ್ತಿದೆ.

ಡಿ. 17ರ ಸೋಮವಾರ ನಡೆಯಲಿರುವ ಈ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ, ಎನ್​ಸಿಪಿ ವರಿಷ್ಠ ಶರದ್​ ಪವಾರ್​, ಲೋಕ ತಾಂತ್ರಿಕ ದಳದ ಸಂಸ್ಥಾಪಕ, ಹಿರಿಯ ರಾಜಕಾರಣಿ ಶರದ್​ ಯಾದವ್, ತಮಿಳುನಾಡಿನ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​, ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್​, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್​ ಯಾದವ್​, ಬಿಎಸ್​ಪಿ ವರಿಷ್ಠೆ ಮಾಯಾವತಿ, ಆಮ್​ ಆದ್ಮಿ ಪಕ್ಷದ ಸಂಸ್ಥಾಪಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಸೇರಿದಂತೆ ಹಲವರು ಹಾಜರಾಗಲಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಆಮಂತ್ರಣ ನೀಡಲಾಗಿದೆಯಾದರೂ, ಅವರು ಖಾಸಗಿ ಕಾರಣಕ್ಕಾಗಿ ಗೈರಾಗುತ್ತಿದ್ದಾರೆ. ಆದರೆ, ತಮ್ಮ ಪ್ರತಿನಿಧಿಯನ್ನು ಸಮಾರಂಭಕ್ಕೆ ಕಳುಹಿಸುತ್ತಿದ್ದಾರೆ.

Comments are closed.