ರಾಷ್ಟ್ರೀಯ

ಬಿಗ್ ಫೈಟ್ ; ರಾಜಸ್ಥಾನ-ಛತ್ತೀಸ್​ಗಢ ಕೈಗೆ, ತೆಲಂಗಾಣದಲ್ಲಿ ಮತ್ತೆ ಟಿಆರ್​ಎಸ್, ಮಿಜೋರಾಂನಲ್ಲಿ ಎಂಎನ್​ಎಫ್​, ಮಧ್ಯಪ್ರದೇಶದಲ್ಲಿ ಸಮ್ಮಿಶ್ರ !

Pinterest LinkedIn Tumblr

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್​ ಎಂದೇ ಕರೆಯಲಾಗುತ್ತಿರುವ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಸದ್ಯದ ಅಂಕಿಅಂಶಗಳ ಪ್ರಕಾರ ಛತ್ತೀಸ್​ಗಡ, ರಾಜಸ್ಥಾನದಲ್ಲಿ ಕಾಂಗ್ರೆಸ್​ ಅಧಿಕಾರ ಸ್ಥಾಪಿಸುವತ್ತ ಧಾಪುಗಾಲಿಟ್ಟಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ನೇರಾನೇರ ಪೈಪೋಟಿ ಏರ್ಪಟ್ಟಿದೆ. ಇನ್ನು ತೆಲಂಗಾಣ ಕೆ. ಚಂದ್ರಶೇಖರ್​ ರಾವ್​ರ ಟಿಆರ್​ಎಸ್​ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ. ಮಿಜೋರಾಂನಲ್ಲಿ ಎಮ್​ಎನ್​ಎಫ್​ ಪಕ್ಷ ಅಧಿಕಾರಕ್ಕೆ ಬರಲಿದೆ.

ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, ರಾಜಸ್ಥಾನ ಮತ್ತು ಛತ್ತೀಸ್ ಘಡದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತು ಮಿಜೋರಾಂನಲ್ಲಿ ಎಂಎನ್ಎಫ್ ಗದ್ದುಗೆ ಹಿಡಿಯುವತ್ತ ಹೆಜ್ಜೆ ಹಾಕಿವೆ. ಮಧ್ಯ ಪ್ರದೇಶದಲ್ಲಿ 230 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾ ರೂಢ ಬಿಜೆಪಿ ಪಕ್ಷ 113 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಬಿಎಸ್ ಪಿ 4 ಕ್ಷೇತ್ರಗಳಲ್ಲಿ ಮತ್ತು ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇನ್ನು ರಾಜಸ್ಥಾನದಲ್ಲೂ ಇದೇ ಪರಿಸ್ಥಿತಿ ಇದ್ದು, ರಾಜಸ್ಥಾನದ ಒಟ್ಟು 199 ಕ್ಷೇತ್ರಗಳ ಪೈಕಿ 101ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 80 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿಯೂ ಬಿಎಸ್ ಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಇತರರು 16 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮತ್ತೊಂದೆಡೆ ಛತ್ತೀಸ್ ಘಡದಲ್ಲೂ ಕಾಂಗ್ರೆಸ್ ನಗೆ ಬೀರಿದ್ದು, ಇಲ್ಲಿನ ಒಟ್ಟು 90 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ 53 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಬಿಎಸ್ ಪಿ ಮೈತ್ರಿಕೂಟ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇತ್ತ ತೆಲಂಗಾಣದಲ್ಲಿ ಟಿಆರ್ ಎಸ್ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಈ ಬಾರಿಯೂ ಸಿಎಂ ಚಂದ್ರಶೇಖರರಾವ್ ಅವರ ಸರ್ಕಾರ ಮುಂದುವರೆಯುವುದು ಸ್ಪಷ್ಟವಾಗಿದೆ. ತೆಲಂಗಾಣದ ಒಟ್ಟು 119 ಕ್ಷೇತ್ರಗಳ ಪೈಕಿ ಟಿಆರ್ ಎಸ್ 82 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕಿದೆ. ಟಿಆರ್ ಎಸ್ ಸ್ಪರ್ಧೆ ನೀಡುತ್ತಿರುವ ಕಾಂಗ್ರೆಸ್ ಮೈತ್ರಿಕೂಟ 25 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇಲ್ಲಿ ಬಿಜೆಪಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಇನ್ನು ಮಿಜೋರಾಂನಲ್ಲಿ ಎಂಎನ್ಎಫ್ ಪಕ್ಷ ಅಧಿಕಾರ ರಚನೆಯತ್ತ ದಾಪುಗಾಲಿರಿಸಿದ್ದು, ಇಲ್ಲಿ 40 ಕ್ಷೇತ್ರಗಳ ಪೈಕಿ ಎಂಎನ್ಎಫ್ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರತಿಪಕ್ಷ ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 1 ಮತ್ತು ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

Comments are closed.