ರಾಷ್ಟ್ರೀಯ

ಉತ್ತರ ಪ್ರದೇಶ: ಎಸ್ಪಿ-ಬಿಎಸ್​ಪಿ ಮೈತ್ರಿಕೂಟ-ಕಾಂಗ್ರೆಸ್ ಗೆ ನಿರಾಸೆ

Pinterest LinkedIn Tumblr


ಲಕ್ನೋ: ಉತ್ತರ ಪ್ರದೇಶ ರಾಜ್ಯದಲ್ಲಿ ಮತ್ತೊಮ್ಮೆ ಚಿಗುರೊಡೆಯಲು ಹರಸಾಹಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಆಸೆಗೆ ಮತ್ತೊಮ್ಮೆ ತಣ್ಣೀರು ಬಿದ್ದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರಲು ಇತರ ಜಾತ್ಯತೀತ ಪಕ್ಷಗಳು ನಿರ್ಧರಿಸಿವೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಎರಡೂ ಮಹಾಮೈತ್ರಿಯ ನೇತೃತ್ವ ವಹಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನ ತನ್ನ ಕೂಟಕ್ಕೆ ಸೇರಿಸಿಕೊಳ್ಳುವ ಕೆಲಸ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಶೀಘ್ರದಲ್ಲೇ ಎಸ್​ಪಿ-ಬಿಎಸ್​ಪಿ ನೇತೃತ್ವದ ಮೈತ್ರಿಕೂಟ ಸದ್ಯದಲ್ಲೇ ಅಧಿಕೃತವಾಗಿ ಘೋಷಣೆಯಾಗಲಿದೆ.

ಈ ಮಹಾಮೈತ್ರಿಯು ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಿರಲಿದೆ. ಎಸ್​ಪಿ, ಬಿಎಸ್​ಪಿ ಜೊತೆಗೆ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ್ ಕೂಡ ಇರಲಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರದಲ್ಲಿ ಸಚಿವರಾಗಿರುವ ಓಂ ಪ್ರಕಾಶ್ ರಾಜಭರ್ ಅವರ ನೇತೃತ್ವದ ಸುಹೇಲ್​ದೇವ್ ಭಾರತೀಯ ಸಮಾಜ ಪಕ್ಷ ಹಾಗೂ ಕೃಷ್ಣ ಪಟೇಲ್ ಬಣದ ಅಪ್ನಾ ದಳ್ ಪಕ್ಷಗಳನ್ನೂ ಮೈತ್ರಿ ತೆಕ್ಕೆಗೆ ತೆಗೆದುಕೊಳ್ಳಲು ಅಖಿಲೇಶ್ ಯಾದವ್ ಮತ್ತು ಮಾಯಾವತಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಸಣ್ಣಪುಟ್ಟ ಪಕ್ಷಗಳನ್ನ ಜೋಡಿಸಿಕೊಳ್ಳುತ್ತಿರುವ ಎಸ್​ಪಿ-ಬಿಎಸ್​ಪಿ ಪಕ್ಷಗಳಿಗೆ ಕಾಂಗ್ರೆಸ್​ನಂತಹ ಸಂಪನ್ಮೂಲಭರಿತ ಪಕ್ಷ ಬೇಡವಾಗಿದ್ದು ಕುತೂಹಲದ ವಿಷಯವೇ.

ಉ.ಪ್ರ. ಪಕ್ಷಗಳ ಈ ಅಚ್ಚರಿಯ ನಿರ್ಧಾರಕ್ಕೂ ಕಾರಣವಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಈ ಪ್ರಾದೇಶಿಕ ಪಕ್ಷಗಳಿಗೆ ಇರಿಸುಮುರುಸು ತಂದಿದ್ದಂತೂ ಸುಳ್ಳಲ್ಲ. ಈ ರಾಜ್ಯಗಳಲ್ಲಿ ತುಸು ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಈ ಪಕ್ಷಗಳು ಮಾಡಿಕೊಂಡ ಮನವಿಯನ್ನು ಕಾಂಗ್ರೆಸ್ ಖಂಡತುಂಡವಾಗಿ ನಿರಾಕರಿಸಿತು. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಗಳ ಪ್ರಾಬಲ್ಯ ಅಷ್ಟಕಷ್ಟೇ. ಅದರಲ್ಲೂ ಎಸ್​ಪಿ ಮತ್ತು ಬಿಎಸ್​ಪಿಗಳಿಗೆ ಇಲ್ಲಿ ನೆಲೆ ಇರುವುದು ತೀರಾ ಅಲ್ಪ ಮಾತ್ರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಹಜವಾಗಿಯೇ ಎಸ್​ಪಿ-ಬಿಎಸ್​ಪಿಯ ಪ್ರಸ್ತಾವಗಳಿಗೆ ಸಮ್ಮತಿ ನೀಡಿಲ್ಲ.

ಇನ್ನು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲೆ ಕಳೆದುಕೊಂಡು ಸಾಕಷ್ಟು ಕಾಲವಾಗಿದೆ. ನೆಹರೂ ಕುಟುಂಬದವರು ಸ್ಪರ್ಧಿಸುವ ಅಮೇಠಿ ಮತ್ತು ರಾಯ್​ಬರೇಲಿ ಬಿಟ್ಟರೆ ಉಳಿದ ಕಡೆ ಕಾಂಗ್ರೆಸ್​ಗೆ ಠೇವಣಿ ಬರುವುದೂ ಕಷ್ಟದ ಸ್ಥಿತಿ ಇದೆ. ಹೀಗಾಗಿ, ಎಸ್​ಪಿ ಮತ್ತು ಬಿಎಸ್​ಪಿ ಪಕ್ಷಗಳು ಕಾಂಗ್ರೆಸ್ ಪ್ರಯತ್ನಕ್ಕೆ ಸೊಪ್ಪು ಹಾಕುವ ಸಾಧ್ಯತೆ ಕಡಿಮೆ. ಬಿಜೆಪಿ ವಿರುದ್ಧ ತಾವು ಹೆಣೆಯುತ್ತಿರುವ ರಣತಂತ್ರಕ್ಕೆ ಕಾಂಗ್ರೆಸ್​ನ ಶಕ್ತಿಯು ನಿಷ್ಫಲವಾಗಿದೆ ಎಂಬುದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರ ಸಮಜಾಯಿಷಿ. ಇದೇನೇ ಇರಲಿ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೇ ಇದ್ದರೂ ಅಮೇಠಿ ಮತ್ತು ರಾಯ್​ಬರೇಲಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಸದೇ ಕಾಂಗ್ರೆಸ್​ಗೆ ಪರೋಕ್ಷ ಸ್ನೇಹಹಸ್ತ ಚಾಚಲು ಈ ಪಕ್ಷಗಳು ನಿರ್ಧರಿಸಿವೆ. ಆ ಮೂಲಕ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದ ಪ್ರಯತ್ನ ಜೀವಂತವಾಗಿದ್ದಂತಾಗಿದೆ.

ಚಿಕ್ಕಣ್ಣನಾಗಲಿರುವ ಎಸ್​​ಪಿ:

ನ್ಯೂಸ್18 ವಾಹಿನಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಎಸ್​ಪಿ ಪಕ್ಷಕ್ಕೆ ಹೆಚ್ಚು ಸ್ಥಾನ ಬಿಟ್ಟುಕೊಡಲು ಸಮಾಜವಾದಿ ಪಕ್ಷ ಒಪ್ಪಿಕೊಂಡಿದೆ. ಈ ಮೂಲಕ ಅಖಿಲೇಶ್ ಯಾದವ್ ಪ್ರಬುದ್ಧತೆ ಮೆರೆದಿದ್ದಾರೆನ್ನಲಾಗಿದೆ. ಅವರವರ ನಡುವೆ ಆಗಿರುವ ಮಾತುಕತೆಯಂತೆ ಬಿಎಸ್​ಪಿಗೆ 34-40 ಕ್ಷೇತ್ರಗಳು ಸಿಗಲಿವೆ. ಆರ್​ಎಲ್​ಡಿಗೆ 3-4, ಎಸ್​ಬಿಎಸ್​ಪಿ ಮತ್ತು ಅಪ್ನಾ ದಳ್ ಪಕ್ಷಗಳಿಗೆ 2-3 ಕ್ಷೇತ್ರಗಳು ಬರಲಿವೆ. ಈ ಕ್ಷೇತ್ರಗಳು ಹಾಗೂ ಅಮೇಠಿ ಮತ್ತು ರಾಯ್​ಬರೇಲಿ ಹೊರತುಪಡಿಸಿ ಮಿಕ್ಕುಳಿದ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ಧಾರೆ.

ಇದನ್ನೂ ಓದಿರಿ
ವಿಪಕ್ಷಗಳಲ್ಲಿ ಮೂಡದ ಒಮ್ಮತ; ಬಿಜೆಪಿ ವಿರೋಧಿ ಪಕ್ಷಗಳ ಸಭೆ ಮುಂದೂಡಿಕೆವಿಪಕ್ಷಗಳಲ್ಲಿ ಮೂಡದ ಒಮ್ಮತ; ಬಿಜೆಪಿ ವಿರೋಧಿ ಪಕ್ಷಗಳ ಸಭೆ ಮುಂದೂಡಿಕೆರಾಷ್ಟ್ರ ರಾಜಕಾರಣದ ಮೇಲೆ ಕರ್ನಾಟಕ ಉಪಚುನಾವಣೆ ಫಲಿತಾಂಶ ಬೀರುವ ಪರಿಣಾಮವೇನು?ರಾಷ್ಟ್ರ ರಾಜಕಾರಣದ ಮೇಲೆ ಕರ್ನಾಟಕ ಉಪಚುನಾವಣೆ ಫಲಿತಾಂಶ ಬೀರುವ ಪರಿಣಾಮವೇನು?ಬ್ರಿಟಿಷರು ಇನ್ನೂ 100 ವರ್ಷ ಆಳಿದ್ದರೆ ನಾವು ಉದ್ಧಾರವಾಗುತ್ತಿದ್ದೆವು!; ಬಿಎಸ್​ಪಿ ನಾಯಕ ಈಗ ವಿವಾದದ ಕೇಂದ್ರಬಿಂದುಬ್ರಿಟಿಷರು ಇನ್ನೂ 100 ವರ್ಷ ಆಳಿದ್ದರೆ ನಾವು ಉದ್ಧಾರವಾಗುತ್ತಿದ್ದೆವು!; ಬಿಎಸ್​ಪಿ ನಾಯಕ ಈಗ ವಿವಾದದ ಕೇಂದ್ರಬಿಂದುಬಿಎಸ್​​ಪಿ ನಾಯಕ ರಾಕೇಶ್​​ ಪಾಂಡೆ ಮಗನಿಗೆ ಜೈಲು: ಪೊಲೀಸರಿಂದ ಆಶೀಶ್​ ಪಾಂಡೆ ವಿಚಾರಣೆಗೆ ಕೋರ್ಟ್​ ಆದೇಶ…ಬಿಎಸ್​​ಪಿ ನಾಯಕ ರಾಕೇಶ್​​ ಪಾಂಡೆ ಮಗನಿಗೆ ಜೈಲು: ಪೊಲೀಸರಿಂದ ಆಶೀಶ್​ ಪಾಂಡೆ ವಿಚಾರಣೆಗೆ ಕೋರ್ಟ್​ ಆದೇಶ…ನ್ಯಾಯಾಲಯಕ್ಕೆ ಶರಣಾದ ಬಿಎಸ್​ಪಿ ಮಾಜಿ ಸಂಸದರ ಮಗ ಆಶೀಶ್​ ಪಾಂಡೆನ್ಯಾಯಾಲಯಕ್ಕೆ ಶರಣಾದ ಬಿಎಸ್​ಪಿ ಮಾಜಿ ಸಂಸದರ ಮಗ ಆಶೀಶ್​ ಪಾಂಡೆ
ಬಿಜೆಪಿಗೂ ತಲೆನೋವು?

ಉತ್ತರ ಪ್ರದೇಶದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಪಕ್ಷಗಳು ಒಂದುಗೂಡಿ ಲೋಕಸಭೆ ಚುನಾವಣೆಯನ್ನ ಎದುರಿಸುತ್ತಿರುವುದು ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಿಂದಲೇ ಬಿಜೆಪಿ ಬರೋಬ್ಬರಿ 77 ಸ್ಥಾನಗಳನ್ನ ಜಯಿಸಿತ್ತು. ಇದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿತ್ತು. ಮುಂದಿನ ಬಾರಿಯೂ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಬೇಕೆಂದರೆ ಉತ್ತರ ಪ್ರದೇಶದಲ್ಲಿ 70 ಸ್ಥಾನವನ್ನಾದರೂ ಗೆಲ್ಲಬೇಕೆಂಬ ಲೆಕ್ಕಾಚಾರವಿದೆ. ಬಿಜೆಪಿಯ ಈ ಲೆಕ್ಕಾಚಾರಕ್ಕೆ ಎಸ್​ಪಿ ಮತ್ತು ಬಿಎಸ್​ಪಿ ಪೆಟ್ಟುಕೊಟ್ಟಿವೆ. ಈ ಮೊದಲು ಈ ರಾಜ್ಯದಲ್ಲಿ ನಡೆದ ಕೆಲ ಉಪಚುನಾವಣೆಗಳಲ್ಲಿ ಬಿಜೆಪಿಯೇತರ ಪಕ್ಷಗಳು ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ತೋರಿಸಿಕೊಟ್ಟಿವೆ. ಇತರ ಪಕ್ಷಗಳು ಒಗ್ಗೂಡಿದರೆ ತಾನು ಗೆಲ್ಲುವುದು ಕಷ್ಟ ಎಂಬುದು ಬಿಜೆಪಿಗೆ ಮನವರಿಕೆಯಾಗಿದೆ. ಹೀಗಾಗಿಯೇ, ಎಸ್​ಪಿ-ಬಿಎಸ್​ಪಿ ಮೈತ್ರಿಯು ಬಿಜೆಪಿಯ ಅಧಿಕಾರದ ಹಾದಿಗೆ ಒಂದು ದೊಡ್ಡ ತಡೆಗೋಡೆಯಂತಾಗಿದೆ.

Comments are closed.