ರಾಷ್ಟ್ರೀಯ

ಹೆಣ್ಣುಮಗು ಜನಿಸಿದ್ದಕ್ಕೆ ಸಂಭ್ರಮಿಸಿ, ಮೆರವಣಿಗೆ, ಬ್ಯಾಂಡ್-ವಾದ್ಯದೊಂದಿಗೆ ಮನೆಗೆ ಕರೆತಂದ!

Pinterest LinkedIn Tumblr


ಸೂರತ್: ಹೆಣ್ಣುಮಗು ಜನಿಸಿದರೆ ಸಾಕು, ತಾತ್ಸಾರ ಮಾಡುವ ಜನರನ್ನು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನಗೆ ಹೆಣ್ಣುಮಗು ಜನಿಸಿರುವ ಕಾರಣ ಸಂಭ್ರಮಿಸಿ ಸಿಹಿ ಹಂಚುತ್ತಾ, ಮಗುವನ್ನು ಮನೆಗೆ ಭರ್ಜರಿ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು, ಸೂರತ್ ಪುರಸಭೆ ವ್ಯಾಪ್ತಿಯ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿರುವ ರಾಕೇಶ್ ಅಲಿಯಾಸ್ ಗಿರೀಶ್ ಪಟೇಲ್ ಎಂಬವರ ಪತ್ನಿ 45 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೀಯಾ ನಾಮಾಂಕಿತ ಹೆಣ್ಣುಮಗುವನ್ನು ಮನೆಯ ಮಹಾಲಕ್ಷ್ಮೀ ಎಂದು ಭಾವಿಸಿರುವ ರಾಕೇಶ್, ಸ್ನೇಹಿತರೊಬ್ಬರ ಸಾಲಂಕೃತ ಕಾರಿನಲ್ಲಿ ಶುಕ್ರವಾರ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ಮುದ್ದಿನ ಮಗಳನ್ನು ಮನೆ ತುಂಬಿಸಿಕೊಂಡಿದ್ದಾರೆ.

ಸಂಭ್ರಮಾಚರಣೆಯ ಭಾಗವಾಗಿ ಸೂರತ್‌ನಿಂದ 35 ಕಿ.ಮೀಟರ್ ದೂರದಲ್ಲಿರುವ ಡೆಹೆನ್ ಎಂಬ ಹಳ್ಳಿಯ ರಸ್ತೆಯಲ್ಲಿ 200 ಅಡಿ ಉದ್ದದ ರಂಗೋಲಿಯ ಸಿಂಗಾರವಿತ್ತು. ರಾಕೇಶ್ ಪತ್ನಿ ಧರ್ಮಿಷ್ಠಾ ಅವರು ತವರು ಮನೆಯಿಂದ ಪತಿಯ ಊರಿಗೆ ಆಗಮಿಸುತ್ತಿದ್ದಂತೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಈ ವೇಳೆ ಅಲ್ಲಿಯ ಮಹಿಳೆಯರು ಗರ್ಬಾ ನೃತ್ಯ ಪ್ರದರ್ಶಿಸಿ ತಾಯಿ ಮಗುವನ್ನು ಸ್ವಾಗತಿಸಿದರು.

ಮನೆಗೆ ಆಗಮಿಸಿದ ಪುತ್ರಿಯನ್ನು ರಾಕೇಶ್ ಭಾವನಾತ್ಮಕವಾಗಿ ಎತ್ತಿ ಸಂಭ್ರಮಿಸಿದ್ದು, ಎಲ್ಲರನ್ನು ಸೆಳೆಯುವಂತಿತ್ತು. ಮುದ್ದಿನ ಮಡದಿ ಹಾಗೂ ಪ್ರೀತಿಯ ಪುತ್ರಿಯನ್ನು ಕರೆದುಕೊಂಡು ಬರಲು ರಾಕೇಶ್, ಸ್ನೇಹಿತರೊಬ್ಬರ ಕಾರನ್ನು ಕೇಳಿಕೊಂಡಿದ್ದರು.

ಈ ಸಂಬಂಧ ವಿಜಯ ಕರ್ನಾಟಕದ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿರುವ ರಾಕೇಶ್, ‘ಮೊದಲ ಪುತ್ರಿಯಾಗಿ ಜನಿಸಿರುವ ಹೀಯಾ, ನನ್ನ ಮನೆಯ ಮಹಾಲಕ್ಷ್ಮೀ ಇದ್ದಂತೆ. ಹೀಗಾಗಿ ಆಕೆಯನ್ನು ಭವ್ಯ ಮೆರವಣಿಗೆ ಮೂಲಕ ಮನೆಗೆ ಬರ ಮಾಡಿಕೊಂಡಿದ್ದೇನೆ. ಸಮಾಜಕ್ಕೆ ಹೆಣ್ಣುಮಗುವಿನ ಮಹತ್ವ ತಿಳಿಸುವ ಉದ್ದೇಶ ನನ್ನದು’ ಎಂದಿದ್ದಾರೆ.

Comments are closed.