ರಾಷ್ಟ್ರೀಯ

ಹೃದಯಾಘಾತ ಬಳಿಕ ಜಯಲಲಿತಾ ಹೃದಯ ಆರೋಗ್ಯವಂತರ ಹೃದಯಷ್ಟೇ ಚೆನ್ನಾಗಿ ಬಡಿದುಕೊಂಡಿತು: ವೈದ್ಯರು

Pinterest LinkedIn Tumblr


ಚೆನ್ನೈ: ಹೃದಯಾಘಾತಕ್ಕೆ ಒಳಗಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಹೃದಯ ಡಿಸೆಂಬರ್ 4, 2016ರಂದು ಹೃದಯಾಘಾತವಾದ 40 ನಿಮಿಷಗಳ ಬಳಿಕ ಆರೋಗ್ಯವಂತರ ಹೃದಯಷ್ಟೇ ಚೆನ್ನಾಗಿ ಒಮ್ಮೆ ಬಲವಾಗಿ ಬಡಿದುಕೊಂಡಿತು ಎಂದು ಚೆನ್ನೈನ ಅಪೊಲೊ ಆಸ್ಪತ್ರೆಯ ಹೃದ್ರೋಗ ತಜ್ಞರು ತಿಳಿಸಿದ್ದಾರೆ.

ಜಯಲಲಿತಾ ಅವರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಆರ್ಮುಗಸ್ವಾಮಿ ಆಯೋಗಕ್ಕೆ ಡಾ. ಪ್ರಕಾಶ್ ಚಂದ್ ಜೈನ್ ಈ ಮಾಹಿತಿ ನೀಡಿದ್ದಾರೆ. ಹೃದ್ರೋಗಿಗಳ ಜೀವ ಉಳಿಸಲು ಸಹಾಯ ಮಾಡಬಲ್ಲ ಸಿಪಿಆರ್ (cardiopulmonary resuscitation) ನೀಡಿದಾಗ ಅವರ ಹೃದಯದ ಇಎಫ್ ಪ್ರಮಾಣ (ರಕ್ತವನ್ನು ಪಂಪ್ ಮಾಡಲು ಹೃದಯದ ಸಾಮರ್ಥ್ಯ ತಿಳಿಸುವ ಮಾನದಂಡ) ಶೇ.60ರಷ್ಟು ದಾಖಲಾಯಿತು. ಇದಕ್ಕೂ ಮುಂಚಿನ ಪರೀಕ್ಷೆಗಳಲ್ಲಿ ಇಎಫ್ ಪ್ರಮಾಣ ಶೇ.67 ಮತ್ತು ಶೇ.75ರಷ್ಟಿತ್ತು ಎಂದಿದ್ದಾರೆ ಡಾ.ಜೈನ್.

ಜಯಲಲಿತಾ ಅವರಿಗೆ ಸಿಆರ್‌ಪಿ ನೀಡಿದಾಗ ತಾವು ಅಪೊಲೊ ಆಸ್ಪತ್ರೆಗೆ ಡಿಸೆಂಬರ್ 4, 2016ರಂದು ಅವರ ಕೊಠಡಿಗೆ ಪ್ರವೇಶಿಸಿದ್ದೆ. ಇಕೊ ಪರೀಕ್ಷೆ ಸಹ ಮಾಡಲಾಗಿತ್ತು, ಆದರೆ ಅದರ ಪ್ರಿಂಟೌಟ್ ತೆಗೆದುಕೊಂಡಿರಲಿಲ್ಲ, ಸಿಆರ್‌ಪಿ ಭಾಗವಾಗಿ ಎಲೆಕ್ಟ್ರಿಕ್ ಶಾಕ್ ಮತ್ತು ಮಸಾಜ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ವಿ ಕೆ ಶಶಿಕಲಾ ಅವರ ಸಂಬಂಧಿಕರು ಜಯಲಲಿತಾ ಮೃತಪಟ್ಟಿದ್ದು ಆಸ್ಪತ್ರೆಯಲ್ಲಿ ದಾಖಲಾದಂತೆ ಡಿಸೆಂಬರ್ 5ರಂದು ಅಲ್ಲ ಡಿಸೆಂಬರ್ 4ರಂದು ಎಂದಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಹೃದಯದಿಂದ ರಕ್ತ ಏನಾದರೂ ಸೋರಿಕೆಯಾಗಿತ್ತೆ ಎಂಬ ವಕೀಲರ ಪ್ರಶ್ನೆಗೆ ಜೈನ್ ಆ ರೀತಿ ಏನು ಆಗಲಿಲ್ಲ. ಶಸ್ತ್ರಚಿಕಿತ್ಸೆಯ ಭಾಗವಾಗಿ 0.12 ಸೆ.ಮೀ ರಂಧ್ರ ಕೊರೆಯಲಾಗಿತ್ತು ಎಂದು ತಿಳಿಸಿದ್ದಾರೆ.

Comments are closed.