ಅಂತರಾಷ್ಟ್ರೀಯ

ಲಂಡನ್​, ಬಾಂಬೆ ಹೈಕೋರ್ಟ್​ನಲ್ಲಿ ​ ಮಲ್ಯಗೆ ಭಾರೀ ಮುಖಭಂಗ

Pinterest LinkedIn Tumblr


ಲಂಡನ್​, ಮುಂಬೈ: ಸಾವಿರಾರು ಕೋಟಿ ವಂಚಿಸಿ ದೇಶದಿಂದ ತಲೆಮರೆಸಿಕೊಂಡಿದ್ದ ಉದ್ಯಮಿ ವಿಜಯ್​ ಮಲ್ಯ ಲಂಡನ್​ನಲ್ಲಿರುವ ತಮ್ಮ ಐಷಾರಾಮಿ ಬಂಗಲೆಯನ್ನು ಉಳಿಸಿಕೊಳ್ಳುವುದರಲ್ಲೂ ವಿಫಲರಾಗಿದ್ದಾರೆ. ಮದ್ಯದ ದೊರೆ ವಿಜಯ್​ ಮಲ್ಯ ಅವರ ಲಂಡನ್​ ನಿವಾಸವನ್ನು ಜಪ್ತಿ ಮಾಡಲು ಯುನೈಟೆಡ್​ ಕಿಂಗ್​ಡಮ್​ನ ಹೈಕೋರ್ಟ್​ ಆದೇಶಿಸಿದೆ.

ಲಂಡನ್​ನಲ್ಲಿರುವ ತಮ್ಮ ಆಸ್ತಿಯನ್ನು ಅಡವಿಟ್ಟು ವಿಜಯ್​ ಮಲ್ಯ ಸ್ವಿಸ್​ ಬ್ಯಾಂಕ್​ನಿಂದ 185 ಕೋಟಿ ಸಾಲ ಪಡೆದಿದ್ದರು. ಆ ಹಣವನ್ನು ಬ್ಯಾಂಕ್​ಗೆ ಮರುಪಾವತಿ ಮಾಡದ ಕಾರಣ ಬಂಗಲೆಯನ್ನು ವಶಕ್ಕೆ ಪಡೆಯಲು ಬ್ಯಾಂಕ್​ಗೆ ಕೋರ್ಟ್​ ಅನುಮತಿ ನೀಡಿದೆ. ವಿಚಾರಣೆಯನ್ನು ಮುಂದಿನ ವರ್ಷ ಮೇ ತಿಂಗಳಿಗೆ ಮುಂದೂಡಿದೆ.

ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್​:

ಲಂಡನ್​ನಲ್ಲಿ ಮಲ್ಯಗೆ ಹಿನ್ನಡೆಯಾದ ಬೆನ್ನಲ್ಲೇ ಭಾರತದಲ್ಲೂ ಭಾರೀ ಮುಖಭಂಗವಾಗಿದೆ. ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋದ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೇಶಭ್ರಷ್ಟ ಎಂಬಂತೆ ಬಿಂಬಿಸಲಾಗಿತ್ತು. ಇದಕ್ಕೆ ವಿಜಯ್​ ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದರು.

ವಿಜಯ್ ಮಲ್ಯ ಪಲಾಯನವಾದಿ ಅಥವಾ ತಲೆಮರೆಸಿಕೊಂಡವನು ಎಂದು ಸಾರಲು ಅನುಮತಿ ನೀಡಬೇಕು. ಹಾಗೂ ಮಲ್ಯ ಒಡೆತನದ 12.5 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ಜಾರಿ ನಿರ್ದೇಶನಾಲಯ (ಇಡಿ) ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಗೆ ತಡೆ ನೀಡುವಂತೆ ಆಗ್ರಹಿಸಿ ವಿಜಯ್​ ಮಲ್ಯ ಬಾಂಬೆ ಹೈಕೋರ್ಟ್​ಗೆ ಮನವಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಇಂದು ಹೈಕೋರ್ಟ್​ ವಜಾಗೊಳಿಸಿದೆ.

ಕಿಂಗ್​ ಫಿಶರ್ ಏರ್​ಲೈನ್ಸ್​ ಮಾಲೀಕರಾಗಿದ್ದ ಮದ್ಯದ ದೊರೆ ವಿಜಯ್​ ಮಲ್ಯ ವಿರುದ್ಧ 2017ರ ನವೆಂಬರ್​ ತಿಂಗಳಲ್ಲಿ ಜಾಮೀನುರಹಿತ ಬಂಧನದ ವಾರೆಂಟ್​ ಹೊರಡಿಸಲಾಗಿತ್ತು. ಆದರೆ, ದೇಶದಲ್ಲೆಲ್ಲೂ ಕಾಣಿಸಿಕೊಳ್ಳದೆ ಮಲ್ಯ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದರು.

Comments are closed.