ರಾಷ್ಟ್ರೀಯ

ಪತ್ನಿಯೊಂದಿಗೆ ಕೂಡಿಬಾಳಲು ಷರತ್ತು ಹಾಕಿದ ಲಾಲು ಪುತ್ರ ತೇಜ್!

Pinterest LinkedIn Tumblr


ಪಟನಾ: ಅತ್ತ ಪತ್ನಿಯಿಂದ ವಿಚ್ಛೇದನ ಬಯಸಿರುವ ಬಿಹಾರ್ ಮಾಜಿ ಸಿಎಂ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ ಟೆಂಪನ್ ರನ್ ಮುಂದುವರೆಸಿದ್ದರೆ, ಇತ್ತ ಅವರ ಕುಟುಂಬ ಈಗಲೂ ಸಹ ಮದುವೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ತೇಜ್ ಪತ್ನಿ ಐಶ್ವರ್ಯ ತಾಯಿ ಪೂರ್ಣಿಮಾ ರಾಯ್ ಶನಿವಾರ ರಾಬ್ರಿ ದೇವಿ ಜತೆ ಗಂಟೆಗೂ ಹೆಚ್ಚು ಕಾಲ ನಡೆದ ವಿಫಲ ಮಾತುಕತೆ ಬಳಿಕ ಅಳುತ್ತ ಹೋಗಿದ್ದು ವರದಿಯಾಗಿದೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಮೊಣಕಾಲಿನ ಸೋಂಕಿನಿಂದಾಗಿ ನಿಲ್ಲಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅದರ ಜತೆಗೆ ಕೌಟುಂಬಿಕ ಸಮಸ್ಯೆಯಿಂದಾಗಿ ಅವರಲ್ಲಿ ಖಿನ್ನತೆಯ ಲಕ್ಷಣಗಳು ಗೋಚರಿಸುತ್ತಿವೆ, ಎಂದು ಅವರು ದಾಖಲಾಗಿರುವ ರಾಂಚಿಯ ರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ತಿಳಿಸಿದ್ದಾರೆ.

ಏತನ್ಮಧ್ಯೆ, ಶುಕ್ರವಾರ ಸಂಜೆ ಮಗನೊಂದಿಗೆ ಸುಮಾರು ಅರ್ಧ ಗಂಟೆ ಫೋನ್ ಸಂಭಾಷಣೆ ನಡೆಸಿರುವ ತಾಯಿ ರಾಬ್ರಿ ದೇವಿ ನಿನ್ನ ಈ ನಿರ್ಧಾರದಿಂದಾಗಿ ತಂದೆಯ ಆರೋಗ್ಯ ಸ್ಥಿತಿ ಕೆಟ್ಟಿದೆ ಎಂದು ಹೇಳಿದ್ದು, ಹೀಗಾಗಿ ಕುಟುಂಬದ ಮೇಲಿದ್ದ ತೇಜ್ ಕೋಪ ಇಳಿದಿದ್ದು ಅವರೀಗ ಸ್ವಲ್ಪ ಶಾಂತವಾಗಿದ್ದಾರೆ ಎಂದು ಆರ್‌ಜೆಡಿ ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಮನೆಗೆ ಬರಲು ಷರತ್ತು

ಕಾರ್ತಿಕ ಪೂರ್ಣಿಮೆ ಬಳಿಕ ಮನೆಗೆ ಬರಲೊಪ್ಪಿರುವ ತೇಜ್ ಎರಡು ಷರತ್ತುಗಳನ್ನು ವಿಧಿಸಿದ್ದಾರೆ. ಐಶ್ವರ್ಯ ಜತೆ ಮತ್ತೆ ಕೂಡಿ ಬಾಳುವಂತೆ ಒತ್ತಾಯಿಸಬಾರದು ಮತ್ತು ಕಿರಿಯ ಸಹೋದರ ತೇಜಸ್ವಿ ಅವರ ಸಹಾಯಕರಾದ ಓಂ ಪ್ರಕಾಶ್, ಮಣಿ ಭೂಷಣ್ ಮತ್ತು ಮಣಿ ಯಾದವ್ ಅವರನ್ನು ಪಕ್ಷದ ವ್ಯವಹಾರದಿಂದ ಹೊರಗಿಡಬೇಕು. ಓಂ ಪ್ರಕಾಶ್ ಮತ್ತು ಮಣಿ ಭೂಷಣ್ ತೇಜ್ ಅವರ ಸೋದರ ಸಂಬಂಧಿಯಾಗಿದ್ದಾರೆ, ಮಣಿ ಯಾದವ್ ತೇಜಸ್ವಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ತೇಜ್ ಅವರ ಎರಡನೆಯ ಬೇಡಿಕೆ ಈಡೇರಿಸುವುದು ಲಾಲು ಕುಟುಂಬಕ್ಕೆ ಹೆಚ್ಚು ಕ್ಲಿಷ್ಟಕರ ಎಂದು ಹೇಳಲಾಗುತ್ತಿದೆ. ಕಾರಣ ಮಣಿ ಭೂಷಣ ತೇಜಸ್ವಿಗೆ ಬಹಳ ಆಪ್ತ ಎಂದು ಪರಿಗಣಿಸಲಾಗುತ್ತದೆ. ಈ ಮೊದಲು ಮಣಿ ಯಾದವ್ ವಿರುದ್ಧ ಲೈಂಗಿಕ ಆರೋಪ ಕೇಳಿ ಬಂದರು ಕೂಡ ತೇಜಸ್ವಿ ಆತನನ್ನು ಪಕ್ಷದಿಂದ ಕೈ ಬಿಡಲು ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲ ಐಶ್ವರ್ಯ ತಂದೆ ಚಂದ್ರಿಕಾ ರಾಯ್ ಆಪ್ತ ಕಾರ್ಯದರ್ಶಿ ವಿಪಿನ್ ತಮ್ಮ ಮನೆಗೆ ಬರುವುದು ತೇಜ್‌ಗೆ ಇಷ್ಟವಿಲ್ಲ. ವಿಪಿನ್ ನಮ್ಮ ಕೌಟುಂಬಿಕ ವಿಚಾರಗಳಲ್ಲಿ ತಲೆ ಹಾಕುತ್ತಾರೆ. ನನ್ನ ಸ್ನೇಹಿತರಿಗೂ ಸಹ ಅವರು ಸಮಸ್ಯೆ ಮಾಡಿದ್ದಾರೆ ಎಂದು ತೇಜ್ ಈ ಹಿಂದೆ ಹೇಳಿದ್ದರು.

ನವೆಂಬರ್ 1 ರಂದು ಪಟನಾದ ಕೌಟುಂಬಿಕ ನ್ಯಾಯಾಲಯದಲ್ಲಿ ತೇಜ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 12ರಂದು ಅವರ ವಿವಾಹವಾಗಿತ್ತು.

Comments are closed.