ಮುಂಬೈ

ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ ನಿಮ್ಮ ಲೈಸೆನ್ಸ್ 3 ತಿಂಗಳಿಗೆ ರದ್ದು!

Pinterest LinkedIn Tumblr


ಮುಂಬಯಿ: ಡ್ರೈವಿಂಗ್ ಮಾಡೋವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ 3 ತಿಂಗಳ ಕಾಲ ಲೈಸೆನ್ಸ್‌ ರದ್ದು- ಮಹಾರಾಷ್ಟ್ರ ಸಂಚಾರಿ ಪೊಲೀಸರು ಕೈಗೊಂಡ ನಿರ್ಧಾರವಿದು. ಸರಕಾರ ಕಳೆದ 3 ವರ್ಷದ ಹಿಂದೆ ಹೊರಡಿಸಿರುವ ನಿರ್ಣಯವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ತಮ್ಮ ಎಲ್ಲ ಶಾಖೆಗಳಿಗೆ, ಇಲಾಖೆ ಸುತ್ತೋಲೆ ಕಳುಹಿಸಿದೆ.

ಸಂಚಾರ ಅಪರಾಧಿಗಳ ಡ್ರೈವಿಂಗ್ ಪರವಾನಗಿ ರದ್ದು ಮಾಡಲು ಪೊಲೀಸ್ ಇಲಾಖೆ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಅನುಮತಿ ಪಡೆಯಬೇಕಾಗುತ್ತದೆ.

ಸರಕಾರಿ ನಿರ್ಣಯದಲ್ಲಿ ಉಲ್ಲೇಖಿಸಲಾಗಿರುವ ಆರು ವಿಧದ ನಿಯಮ ಉಲ್ಲಂಘನೆಗಳಿಗಾಗಿ ಕನಿಷ್ಟ ಮೂರು ತಿಂಗಳ ಕಾಲ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಅಧಿಕಾರವಿದೆ. ಪುಣೆ-ಮುಂಬೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ‘ಶೂನ್ಯ ಸಹನೆ’ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು ಮತ್ತು ಶೀಘ್ರದಲ್ಲೇ ಇದು ಇತರ ಹೆದ್ದಾರಿಗಳಲ್ಲಿಯೂ ಸಹ ಪ್ರಾರಂಭವಾಗಲಿದೆ.

ವೇಗದ ಚಾಲನೆ, ಕುಡಿದು ಚಾಲನೆ, ಸಿಗ್ನಲ್ ಜಂಪ್ ಮಾಡುವುದು, ಡ್ರೈವ್ ಮಾಡುವಾಗ ಮೊಬೈಲ್ ಸಂಭಾಷಣೆ, ವಾಣಿಜ್ಯೋದ್ದೇಶದ ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ ಮತ್ತು ಓವರ್ ಲೋಡಿಂಗ್- ಈ 6 ಕಾರಣಗಳಿಗೆ ಲೈಸೆನ್ಸ್ ರದ್ದು ಮಾಡಲು ಆರ್‌ಟಿಒಗೆ ಅಧಿಕಾರವಿದೆ.

ಹೆಚ್ಚಿನ ಮೊತ್ತದ ದಂಡ ವಿಧಿಸಿದರೂ ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ . ಮೂರು ತಿಂಗಳ ಕಾಲ ತನ್ನ ವಾಹನಾ ಚಾಲನಾ ಪರವಾನಗಿಯನ್ನು ನಿಷೇಧಿಸಿದರೆ ಅದರಿಂದ ತಕ್ಕ ಪಾಠ ಕಲಿಯುತ್ತಾರೆ ಎಂದು ಹೆದ್ದಾರಿ ಎಸ್ಪಿ ವಿಜಯ್ ಪಾಟೀಲ್ ಅಭಿಪ್ರಾಯ ಪಡುತ್ತಾರೆ.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ 35,800 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿವೆ. ಪರಿಣಾಮವಾಗಿ 12,200 ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ರಸ್ತೆ ಅಪಘಾತ ಮತ್ತು ಸಾವುಗಳನ್ನು 10% ರಷ್ಟು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.

Comments are closed.