ರಾಷ್ಟ್ರೀಯ

‘ಗಜ’ ಚಂಡಮಾರುತ: ರಾಜ್ಯದಲ್ಲಿ ಬೀಳುತ್ತಾ ಮಳೆ?

Pinterest LinkedIn Tumblr
This satellite i

ಬೆಂಗಳೂರು: ಪುದುಚೇರಿ ಸಮೀಪ ಸೃಷ್ಟಿಯಾದ ಗಜ ಚಂಡಮಾರುತವು ಇದೀಗ ತೀವ್ರ ಸ್ವರೂಪ ಪಡೆದುಕೊಂಡು ತಮಿಳುನಾಡನ್ನು ರಾಚುತ್ತಿದೆ. ನಾಗಪಟ್ಟಣಂ, ಕಾರೈಕ್ಕಲ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆ ಭೋರ್ಗರೆಯುತ್ತಿದೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಸರಕಾರವು ಮುನ್ನೆಚ್ಚರಿಕೆಯಾಗಿ ಹಲವು ಭಾಗಗಳಿಂದ ಜನರನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿತ್ತು. ನಾಗಪಟ್ಟಿಣಂ, ತಿರುವರೂರು, ಕಡಲೂರು, ರಾಮನಾಥಪುರಂ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

ಇನ್ನು ತಮಿಳುನಾಡಿನ ಗಡಿ ಹಂಚಿಕೊಂಡಿರೋ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಂತರ ಮತ್ತು ನಗರ, ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಈ ರೀತಿಯ ವಾತಾವರಣ ಇನ್ನೂ 3 ದಿನ ಮುಂದುವರಿಯಲಿದೆ.

ಚೆನ್ನೈ ಭಾಗದಲ್ಲಿ ಸೈಕ್ಲೋನ್ ಆಗಿದ್ದರೆ ಕರ್ನಾಟಕಕ್ಕೆ ಹೆಚ್ಚಿನ ಮಳೆಯಾಗುತಿತ್ತು. ಆದ್ರೆ ಈ ಬಾರಿ ಸೈಕ್ಲೋನ್ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಉಂಟಾಗಿದ್ದರಿಂದ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇಲ್ಲ. ಈ ಗಜ ಚಂಡಮಾರುತವು ಮುಂದಿನ ಎರಡು ದಿನಗಳಲ್ಲಿ ಕೇರಳ ಪ್ರವೇಶಿಸಲಿದೆ. ನಂತರ ಸೈಕ್ಲೋನ್ ತನ್ನ ತೀವ್ರತೆ ಮತ್ತು ವೇಗವನ್ನು ಕಳೆದುಕೊಳ್ಳಲಿದ್ದು ಕ್ರಮೇಣವಾಗಿ ಕರ್ನಾಟಕದ ಕರಾವಳಿ ಪ್ರದೇಶ ತಲುಪಲಿದೆ. ರಾಜ್ಯದ ಕರಾವಳಿ ಪ್ರದೇಶಗಳಾದ ಮಂಗಳೂರು, ಕಾರವಾರ, ಉಡುಪಿ ಜಿಲ್ಲೆಗಳಲ್ಲಿ ನ. 18 ಮತ್ತು 19ರಂದು ಸ್ವಲ್ಪಮಟ್ಟಿಗೆ ಮಳೆ ಬೀಳುವ ಸಾಧ್ಯತೆ ಇದೆ.

ಒಟ್ಟಿನಲ್ಲಿ, ಈ ಬಾರಿ‌ ರಾಜ್ಯದ ಜನತೆಗೆ ಹಿಂಗಾರು ಮಳೆ ನಿರಾಸೆ ಮೂಡಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಸೈಕ್ಲೋನ್ ಮೂಲಕವಾದ್ರೂ ಮಳೆ ಸಿಂಚನವಾಗಬಹುದು ಎಂಬ ಆಶಾಭಾವನೆಗೆ ತಣ್ಣೀರು ಬಿದ್ದಿದೆ.

Comments are closed.