ಅಂತರಾಷ್ಟ್ರೀಯ

ಇರಾನ್‌ ಮೇಲೆ ಅಮೆರಿಕ ಹಾಕಿರುವ ನಿರ್ಬಂಧ: ಭಾರತಕ್ಕೆ ಕಚ್ಚಾ ತೈಲ ಪೂರೈಕೆಗೆ ಸೌದಿ ಸಮ್ಮತಿ

Pinterest LinkedIn Tumblr


ಹೊಸದಿಲ್ಲಿ : ಇರಾನ್‌ ಮೇಲೆ ಅಮೆರಿಕ ಹಾಕಿರುವ ನಿರ್ಬಂಧದಿಂದ ಭಾರತದ ತೈಲ ಪೂರೈಕೆಗೆ ಆಗಬಹುದಾದ ಕೊರತೆಯನ್ನು ಸೌದಿ ಅರೇಬಿಯಾ ತುಂಬಿಕೊಡಲು ಸಮ್ಮತಿಸಿದೆ. ನವೆಂಬರ್‌ನಲ್ಲಿ ತನ್ನ ತೈಲೋತ್ಪಾದನೆಯನ್ನು ಹೆಚ್ಚಿಸಿ ಭಾರತದ ಬೇಡಿಕೆಯನ್ನು ಪೂರೈಸಲಾಗುವುದು ಎಂದು ಸೌದಿ ಅರೇಬಿಯಾದ ತೈಲ ಸಚಿವ ಖಲೀದ್‌ ಅಲ್‌ ಫಲೀಹ್‌ ಸೋಮವಾರ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಯೋಜಿಸಿದ್ದ ಭಾರತೀಯ ಹಾಗೂ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ವಲಯದ ಕಂಪನಿಗಳ ಸಿಇಒಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಖಲೀದ್‌ ಅಲ್‌ ಫಲೀಹ್‌ ಈ ವಿಷಯ ತಿಳಿಸಿದ್ದಾರೆ. ಭಾರತ ತನ್ನ ವ್ಯೂಹಾತ್ಮಕ ಪಾಲುದಾರಿಕೆ ಹೊಂದಿರುವ ಮಿತ್ರ ರಾಷ್ಟ್ರವಾಗಿದ್ದು, ಬೇಡಿಕೆಯನ್ನು ಪೂರೈಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅವರ ಈ ಹೇಳಿಕೆಯು ತೈಲ ಕೊರತೆಯ ಭೀತಿಯನ್ನು ನಿವಾರಿಸಿದ್ದು, ಮುಂದಿನ ದಿನಗಳಲ್ಲಿ ತೈಲ ದರ ಇಳಿಕೆಯ ಆಶಾವಾದವನ್ನೂ ಮೂಡಿಸಿದೆ.

”ಸೌದಿಯು ಪ್ರತಿ ದಿನ 1.20 ಕೋಟಿ ಬ್ಯಾರೆಲ್‌ ತೈಲ ಉತ್ಪಾದಿಸುವ ಸಾಮರ್ಥ್ಯ‌ ಹೊಂದಿದ್ದು, ಸದ್ಯ 1.07 ಕೋಟಿ ಬ್ಯಾರೆಲ್‌ನಷ್ಟು ಉತ್ಪಾದಿಸುತ್ತಿದೆ. ನವೆಂಬರ್‌ನಿಂದ ಇದನ್ನು ಹೆಚ್ಚಿಸಲಾಗುವುದು” ಎಂದು ಎಂದು ಫಲೀಹ್‌ ಹೇಳಿದ್ದಾರೆ. ಸೌದಿ ಅರೇಬಿಯಾ ತನ್ನ ಉತ್ಪಾದನಾ ಸಾಮರ್ಥ್ಯ‌ವನ್ನು ಹೆಚ್ಚಿಸಲು ಭಾರಿ ಮೊತ್ತದ ಬಂಡವಾಳ ಹೂಡಿಕೆ ಮಾಡಿದೆ. ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯ ಸಲುವಾಗಿ ಸೌದಿ ಬದ್ಧವಾಗಿದೆ ಎಂದು ವಿವರಿಸಿದರು. ಸಾರ್ವಜನಿಕ ತೈಲ ಕಂಪನಿ ಸೌದಿ ಅರಾಮ್ಕೊ, ನವೆಂಬರ್‌ನಲ್ಲಿ ಭಾರತದ ಗ್ರಾಹಕರಿಗೆ ಹೆಚ್ಚುವರಿ 40 ಲಕ್ಷ ಬ್ಯಾರೆಲ್‌ ತೈಲ ಪೂರೈಸಲು ನಿರ್ಧರಿಸಿದೆ.

” ಕಳೆದ ಒಂದು ವರ್ಷದಿಂದೀಚೆಗೆ ತೈಲ ದರಗಳಲ್ಲಿ ಡಾಲರ್‌ ಲೆಕ್ಕದಲ್ಲಿ ಶೇ.50 ಹಾಗೂ ರೂಪಾಯಿ ಲೆಕ್ಕದಲ್ಲಿ ಶೇ.70ರಷ್ಟು ವೃದ್ಧಿಸಿದೆ” ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು. ಹಣಕಾಸು ಸಚಿವ ಅರುಣ್‌ ಜೇಟ್ಲಿ, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌, ಇರಾನ್‌ ವಿರುದ್ಧ ಅಮೆರಿಕದ ಆರ್ಥಿಕ ನಿರ್ಬಂಧದಿಂದ ಉಂಟಾಗಿರುವ ಬಿಕ್ಕಟ್ಟು ಕುರಿತು ಚರ್ಚಿಸಿದರು.

ತೈಲ ವಲಯದ ಪ್ರಮುಖರ ಜತೆಗೆ ಪ್ರಧಾನಿ ಮೋದಿಯವರು ನಡೆಸುತ್ತಿರುವ ಮೂರನೇ ವಾರ್ಷಿಕ ಸಭೆ ಇದಾಗಿದೆ. 2016ರ ಜನವರಿ 5ರಂದು ಮೊದಲ ಸಭೆ ನಡೆಸಿದ್ದರು. ಆಗ ನೈಸರ್ಗಿಕ ಅನಿಲ ದರದ ಸುಧಾರಣೆಗೆ ಚರ್ಚೆ ನಡೆದಿತ್ತು. 2017ರ ಅಕ್ಟೋಬರ್‌ನಲ್ಲಿ ಎರಡನೇ ಸಭೆಯಲ್ಲಿ, ಒಎನ್‌ಜಿಸಿ, ಒಐಎಲ್‌ ಜತೆ ಸಹಭಾಗಿತ್ವದಲ್ಲಿ ತೈಲ ಮತ್ತು ಅನಿಲೋತ್ಪಾದನೆಗೆ ವಿದೇಶಿ, ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲು ಸಲಹೆ ಬಂದಿತ್ತು. ಆದರೆ ಒಎನ್‌ಜಿಸಿ ಇದಕ್ಕೆ ಒಪ್ಪಿರಲಿಲ್ಲ.

ಒಟ್ಟಾರೆಯಾಗಿ ಭಾರತದ ತೈಲ ಮತ್ತು ಅನಿಲ ವಲಯದಲ್ಲಿ ಹೂಡಿಕೆಯ ಹರಿವನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸರಕಾರ ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಯತ್ನಿಸುತ್ತಿದೆ. ಪ್ರತಿ ವರ್ಷ ಬೇಡಿಕೆ ಶೇ.5-6ರಷ್ಟು ಹೆಚ್ಚುತ್ತಿದೆ. ದೇಶ ಶೇ.83ರಷ್ಟು ಬೇಡಿಕೆಯನ್ನು ಪೂರೈಸಲು ಆಮದನ್ನು ಅವಲಂಬಿಸಿದೆ.

ಆರ್ಥಿಕತೆ ಮೇಲೆ ಪರಿಣಾಮ

ಕಚ್ಚಾ ತೈಲ ದರ ಏರಿಕೆಯಿಂದ ಜಾಗತಿಕ ಆರ್ಥಿಕತೆಗೆ ಧಕ್ಕೆಯಾಗುತ್ತಿದ್ದು, ತೈಲೋತ್ಪಾದಕ ರಾಷ್ಟ್ರಗಳು ಕೂಡಲೇ ತೈಲ ದರವನ್ನು ತಾರ್ಕಿಕ ಮಟ್ಟಕ್ಕೆ ಇಳಿಸಬೇಕು ಎಂದು ಪ್ರಧಾನಿ ಸಭೆಯಲ್ಲಿ ಒತ್ತಾಯಿಸಿದರು. ಸ್ಥಳೀಯ ಕರೆನ್ಸಿಗಳು ಡಾಲರ್‌ ಎದುರು ಕುಸಿಯುತ್ತಿರುವುದರಿಂದ ಹಣ ಪಾವತಿಗೆ ಡಾಲರ್‌ ಹೊರತಾದ ಅನ್ಯ ದಾರಿಗಳನ್ನು ಕಂಡುಕೊಳ್ಳಬೇಕು ಎಂದು ಕೂಡಾ ಅವರು ಮನವಿ ಮಾಡಿದರು.

ಜಾಗತಿಕ ಆರ್ಥಿಕತೆಯ ಸ್ಥಿರತೆಯ ದೃಷ್ಟಿಯಿಂದ ತೈಲೋತ್ಪಾದಕರು ಮತ್ತು ಗ್ರಾಹಕರ ನಡುವೆ ಪಾಲುದಾರಿಕೆ ಹೆಚ್ಚಬೇಕು. ತೈಲೋತ್ಪಾದಕ ರಾಷ್ಟ್ರಗಳು ತಮ್ಮ ಹೆಚ್ಚುವರಿ ಹೂಡಿಕೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ತೈಲ ವಲಯದಲ್ಲಿ ಹೊಸ ಹೂಡಿಕೆ ಮಾಡಬೇಕು ಎಂದಿದ್ದಾರೆ.

‘ಭಾರತದ ತೈಲ ವಲಯದಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದ್ದರೂ ಯಾಕೆ ಹೂಡಿಕೆಗೆ ಮುಂದೆ ಬರುತ್ತಿಲ್ಲ?’ ಎಂದು ತೈಲ ಕಂಪನಿಗಳ ಸಿಇಒಗಳನ್ನು ಪ್ರಧಾನಿ ಮೋದಿ ಪ್ರಶ್ನಿಸಿದರು.

ತೈಲೋತ್ಪಾದನೆ ಎಷ್ಟು?

ಸೌದಿ ಅರೇಬಿಯಾ ಪ್ರತಿ ದಿನ ಸರಾಸರಿ 1.01 ಕೋಟಿ ಬ್ಯಾರೆಲ್‌ ತೈಲೋತ್ಪಾದನೆ ಮಾಡುತ್ತಿದೆ. ಅಮೆರಿಕ 1.06 ಕೋಟಿ ಬ್ಯಾರೆಲ್‌ ಉತ್ಪಾದಿಸುತ್ತಿದ್ದು, ತುಸು ಮುಂದಿದೆ. ಹೀಗಿದ್ದರೂ, ಸೌದಿ ಅರೇಬಿಯಾ ದಿನಕ್ಕೆ ಸರಾಸರಿ 70 ಲಕ್ಷ ಬ್ಯಾರೆಲ್‌ ತೈಲ ರಫ್ತು ಮಾಡುತ್ತಿದ್ದರೆ, ಅಮೆರಿಕ 18 ಲಕ್ಷ ಬ್ಯಾರೆಲ್‌ ಮಾಡುತ್ತಿದೆ. ಅಮೆರಿಕ ಉತ್ಪಾದಿಸುವ ಬಹುಪಾಲು ತೈಲ ಅದರ ಬಳಕೆಗೇ ಬೇಕಾಗುತ್ತದೆ.

Comments are closed.