ರಾಷ್ಟ್ರೀಯ

ಸುಪ್ರೀಂ ತೀರ್ಪಿನಿಂದ ಶಬರಿಮಲೆಗೆ ಮಹಿಳಾ ಹೋರಾಟಗಾರರು ಮಾತ್ರ ಬರುವ ನಿರೀಕ್ಷೆ

Pinterest LinkedIn Tumblr


ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ತಡೆಯನ್ನು ಸುಪ್ರೀಂಕೋರ್ಟ್ ನಿವಾರಿಸಿದ ಬೆನ್ನಲ್ಲೇ ಸುಪ್ರೀಂ ತೀರ್ಪಿನ ಪರ ಮತ್ತು ವಿರೋಧ ವಾದಗಳು ಕೇಳಿಬಂದಿದ್ದು, ಮಹಿಳಾ ಪರ ಹೋರಾಟಗಾರರು ಮಾತ್ರ ಶಬರಿಮಲೆಗೆ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಎ ಪದ್ಮಕುಮಾರ್ ತಿಳಿಸಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿಯ ಬಳಿಕ ಮಾತನಾಡಿದ ಪದ್ಮಕುಮಾರ್, ಸುಪ್ರೀಂ ಆದೇಶದಂತೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದರೆ, ಮಹಿಳೆಯರಿಗಾಗಿ ಪ್ರತ್ಯೇಕ ಕೆಲವೊಂದು ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ. ಆದರೆ ಶಬರಿಮಲೆ ಪರಿಯಾರ್ ಹುಲಿ ಅಭಿಯಾರಣ್ಯ ವ್ಯಾಪ್ತಿಯಲ್ಲಿದೆ. ಹೀಗಾಗಿ ಅಲ್ಲಿ ಯಾವುದೇ ನಿರ್ಮಾಣ ಕಾರ್ಯ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಮಸ್ಯೆಯಿದೆ.

ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ, ವಸತಿ ಮತ್ತು ವಿಶ್ರಾಂತಿ ವ್ಯವಸ್ಥೆ ಕಲ್ಪಿಸಬೇಕಾದರೆ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಅದಕ್ಕಾಗಿ 100 ಎಕರೆ ಹೆಚ್ಚುವರಿ ಜಾಗ ನೀಡುವಂತೆ ಕೇಂದ್ರ ಸರಕಾರವನ್ನು ಕೋರಲಿದ್ದೇವೆ ಎಂದು ಹೇಳಿದ್ದಾರೆ.

ಸುಪ್ರೀಂ ತೀರ್ಪಿನಿಂದ ಬೇಸರವಾಗಿದೆ. ಕೇವಲ ಮೂಲಭೂತ, ಸಾಂವಿಧಾನಿಕ ಅಂಶಗಳನ್ನು ಗಮನಿಸುವ ಜತೆಗೆ ದೇಗುಲದ ಭೌಗೋಳಿಕ ಹಿನ್ನೆಲೆ, ಕೆಲವೊಂದು ನಿಯಮಗಳ ಬಗ್ಗೆಯೂ ಗಮನಿಸಬೇಕಿತ್ತು ಎಂದು ಪದ್ಮಕುಮಾರ್ ಹೇಳಿದ್ದು, ಕಳೆದ ಬಾರಿಯ ಪೂಜೆ ಸಂದರ್ಭ ವಿಪರೀತ ಜನಸಂದಣಿಯಿಂದ ಭಕ್ತರು 17 ಗಂಟೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ಬೆಟ್ಟಗುಡ್ಡದ ಕಡಿದಾದ ಹಾದಿಯಲ್ಲಿ ಅಷ್ಟೊಂದು ದೂರ ನಡೆದುಕೊಂಡು ಬರುವುದು ಕೂಡ ಮಹಿಳೆಯರಿಗೆ ಸಲೀಸಲ್ಲ.

ಹೀಗಾಗಿ ತೀರ್ಪು ಬಂದಿರುವುದಕ್ಕೆ ಅದನ್ನು ಸಂಭ್ರಮಿಸುವ ಮನಸ್ಥಿತಿಯಿರುವ ಮಹಿಳಾ ಹೋರಾಟಗಾರರು ಮಾತ್ರ ಶಬರಿಮಲೆಗೆ ಬರುವ ನಿರೀಕ್ಷೆಯಿದೆ. ಉಳಿದಂತೆ ಶಬರಿಮಲೆಯ ಐತಿಹ್ಯ, ಹಿನ್ನೆಲೆ ಮತ್ತು ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ಅರಿವಿರುವ ಯಾವ ಮಹಿಳಾ ಭಕ್ತರು ಕೂಡ ನಿಯಮ ಮೀರಿ ದೇಗುಲಕ್ಕೆ ಬರಲಾರರು ಎಂದು ಪದ್ಮಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Comments are closed.