ರಾಷ್ಟ್ರೀಯ

ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರದಿಂದ ದೀಪಾವಳಿ ಉಡುಗೊರೆ!

Pinterest LinkedIn Tumblr


ಹೊಸದಿಲ್ಲಿ: ದೇಶದ ಲಕ್ಷಾಂತರ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಿ ಮೋದಿ ದೀಪಾವಳಿ ಹಬ್ಬದ ಕಾಣಿಕೆ ನೀಡಿದ್ದಾರೆ.

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುವ ಗೌರವಧನವನ್ನು ಅಕ್ಟೋಬರ್‌ನಿಂದ ಹೆಚ್ಚಿಸುವುದಾಗಿ ಅವರು ಘೋಷಿಸಿದ್ದಾರೆ.

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜತೆಗಿನ ಡಿಜಿಟಲ್‌ ಸಂವಾದದಲ್ಲಿ ಮಾತನಾಡಿದ ಮೋದಿ, ”ಮಾನ್ಯತೆ ಪಡೆದ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ವಿವಿಧ ಸಾಮಾಜಿಕ ಸುರಕ್ಷ ತೆ ಯೋಜನೆಗಳ ವ್ಯಾಪ್ತಿಗೆ ಸೇರಿಸಲಾಗುವುದು. ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಭೀಮಾ ಹಾಗೂ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯಡಿ ಉಚಿತ ವಿಮೆ ಸೌಲಭ್ಯವನ್ನೂ ಕಲ್ಪಿಸಲಾಗುವುದು. ಇವರು ವಿಮೆಗಾಗಿ ಯಾವುದೇ ಪ್ರೀಮಿಯಂ ಹಣ ಪಾವತಿಸುವಂತಿಲ್ಲ. ಆಕಸ್ಮಿಕ ಘಟನೆಗಳ ಸಂದರ್ಭದಲ್ಲಿ 4 ಲಕ್ಷ ರೂ. ಪಡೆಯಲಿದ್ದಾರೆ,” ಎಂದು ಘೋಷಿಸಿದರು.

ಕಾರ್ಯಕ್ಷಮತೆಗೆ ಒತ್ತು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹೆಚ್ಚುವರಿ ಗೌರವ ಧನ ಪಡೆಯಲು ನೂತನ ‘ಐಸಿಡಿಎಸ್‌- ಸಿಎಎಸ್‌’ ಸಾಫ್ಟ್‌ವೇರ್‌ ತಂತ್ರಾಂಶ ಬಳಸಿಕೊಳ್ಳುವಂತೆ ಪ್ರಧಾನಿ ಸಲಹೆ ನೀಡಿದರು. ಕಾರ್ಯಕ್ಷ ಮತೆ ಆಧಾರದ ಮೇಲೆ ಗೌರವಧನವನ್ನು 250 ರಿಂದ 500 ರೂವರೆಗೂ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

ಆಧುನಿಕ ತಂತ್ರಜ್ಞಾನ ಮೂಲಕ ಆರೋಗ್ಯ ಸುಧಾರಣೆ ಹಾಗೂ ನ್ಯೂಟ್ರಿಷನ್‌ ಮಿಷನ್‌ ಸಾಧನೆಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದರು.

ಆಶಾ ಕಾರ್ಯಕರ್ತರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಪ್ರತ್ಯೇಕವಾಗಿ ಗೌರವಧನ ನೀಡುತ್ತವೆ. ಹಾಲಿ ಹೆಚ್ಚಳ ಕೇಂದ್ರದ ಪಾಲಿನ ಗೌರವಧನಕ್ಕೆ ಅನ್ವಯವಾಗಲಿದೆ.

====================

12,83,707: ದೇಶದ ಒಟ್ಟು ಅಂಗನವಾಡಿ ಕಾರ್ಯಕರ್ತೆಯರ ಸಂಖ್ಯೆ

10,23,136: ದೇಶಾದ್ಯಂತ ಆಶಾ ಕಾರ್ಯಕರ್ತರ ಒಟ್ಟು ಸಂಖ್ಯೆ

10, 50,564: ಅಂಗನವಾಡಿ ಸಹಾಯಕರ ಒಟ್ಟು ಸಂಖ್ಯೆ

14 ಲಕ್ಷ: ದೇಶಾದ್ಯಂತ ಅಂಗನವಾಡಿ ಕೇಂದ್ರಗಳ ಸಂಖ್ಯೆ

10 ಕೋಟಿ: ಅಂಗನವಾಡಿ ಕೇಂದ್ರಗಳ ಫಲಾನುಭವಿಗಳು

ಎಷ್ಟು ಏರಿಕೆ?

3,000 ರೂ. ಇದ್ದವರಿಗೆ 4,500 ರೂ. (1,500 ರೂ.)

2,200 ರೂ. ಇದ್ದವರಿಗೆ 3, 500 ರೂ. (1,300 ರೂ.)

1,500 ರೂ. ಪಡೆಯುತ್ತಿದ್ದ ಸಹಾಯಕಿಯರಿಗೆ 2,500 ರೂ. (1,000 ರೂ.)

Comments are closed.