ರಾಷ್ಟ್ರೀಯ

ಕೇರಳ: ಪ್ರವಾಹದಿಂದ 357 ಕಾರುಗಳನ್ನು ಕಳೆದುಕೊಂಡ ಶೋರೂಂ

Pinterest LinkedIn Tumblr


ಕೊಚ್ಚಿ: ಕೇರಳದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಸಾವಿರಾರು ಕೋಟಿ ರೂ. ನಷ್ಟವಾಗಿದ್ದು, ಹಲವು ಜೀವಗಳು ಬಲಿಯಾಗಿದ್ದವು. ಇದೇ ರೀತಿ ಪ್ರವಾಹದಿಂದಾಗಿ ತ್ರಿಶ್ಶೂರ್‌ನ ಕಾರ್‌ ಶೋರೂಂ ಒಂದು 357 ಹೊಚ್ಚ ಹೊಸ ಕಾರುಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದೆ. ವಾಹನಗಳನ್ನು ಸಂಪೂರ್ಣ ನಷ್ಟ ಎಂದು ಇನ್ಶೂರೆನ್ಸ್ ಕಂಪನಿಯವರು ಉಲ್ಲೇಖ ಮಾಡಿದ ಬಳಿಕ ಕಾರ್ ಶೋರೂಂ ಈ ನಿರ್ಧಾರಕ್ಕೆ ಬಂದಿದೆ.

ಅಲ್ಲದೆ, ಮಾರುತಿ ಕಾರಿನ ಡೀಲರ್ ಆದ ಬಿಆರ್‌ಡಿ ಕಾರ್‌ ವರ್ಲ್ಡ್‌ ಶೋರೂಂನಲ್ಲಿ 147 ಬಳಸಿದ ಕಾರುಗಳು ಹಾಗೂ 110 ಗ್ರಾಹಕರ ವಾಹನಗಳಿಗಾಗಿರುವ ಹಾನಿಯ ಪ್ರಮಾಣದ ಬಗ್ಗೆಯೂ ವಿಮೆ ಸಮೀಕ್ಷಕರು ಮೌಲ್ಯಮಾಪನ ಮಾಡಲಿದ್ದಾರೆ.

ಕೇರಳದಲ್ಲಿ ಉಂಟಾದ ಪ್ರವಾಹದಿಂದ ಶೋ ರೂಂನಲ್ಲಿದ್ದ ಹೊಸ ಕಾರುಗಳು ಸಂಪೂರ್ಣ ಮುಳುಗಿ ಹೋಗಿದ್ದವು. ಕಾರಿನ ಡ್ಯಾಶ್‌ಬೋರ್ಡ್‌ವರೆಗೆ ನೀರು ಬಂದಿದ್ದ ಕಾರಣ ಕಾರುಗಳು ಹಾನಿಯಾಗಿರುವ ಪ್ರಮಾಣ ‘ಸಿ’ ಕ್ಯಾಟಗರಿಗೆ ಸೇರಿದೆ. ಹೀಗಾಗಿ, ಯುನೈಟೆಡ್‌ ಇನ್ಶೂರೆನ್ಸ್‌ ಕಂಪನಿಯವರು ಆ ಕಾರುಗಳನ್ನು ಸಂಪೂರ್ಣ ನಷ್ಟ ಎಂದು ತಿಳಿಸಿದ್ದಾರೆ. ಜತೆಗೆ, ವಿಮೆಗಾರರು ಹಾಗೂ ಪುಣೆ, ಜೈಪುರ, ಅಹಮದಾಬಾದಿನ ಖರೀದಿದಾರರು ಆ ಕಾರುಗಳ ಬೆಲೆ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.

ಆ 357 ಹೊಸ ಕಾರುಗಳ ಮಾರುಕಟ್ಟೆ ಬೆಲೆ ಜಿಎಸ್‌ಟಿ ಸೇರಿ 28 ಕೋಟಿ 75 ಲಕ್ಷ ರೂ. ಎಂದು ಮೂಲಗಳು ಮಾಹಿತಿ ನೀಡಿದ್ದಾರೆ. ಜತೆಗೆ, ಆ ಶೋರೂಮಿನಲ್ಲಿ ಸುಮಾರು 500 ಹೊಸ ಕಾರುಗಳನ್ನು ಶೇಖರಿಸಿ ಇಡಲಾಗಿತ್ತಾದರೂ, ನೀರಿನ ಪ್ರಮಾಣ ಹೆಚ್ಚಾದ ಕಾರಣ ಕೆಲವು ಕಾರುಗಳನ್ನು ಸುರಕ್ಷತಾ ಸ್ಥಳಕ್ಕೆ ರವಾನೆ ಮಾಡಿತ್ತು ಎಂದು ತಿಳಿದುಬಂದಿತ್ತು.

ಇನ್ನು, ವಾಹನಗಳಿಗೆ ತೊಂದರೆಯಾಗಿರುವುದನ್ನು ಸ್ಪಷ್ಟಪಡಿಸಿದ ಬಿಆರ್‌ಡಿ ಕಾರ್‌ ವರ್ಲ್ಡ್‌ ಶೋರೂಂ ಅಧಿಕಾರಿ, ಪ್ರವಾಹಕ್ಕೆ ತೊಂದರೆಗೀಡಾಗಿರುವ ಕಾರುಗಳ ಮಾಹಿತಿ ಬಗ್ಗೆ ಕಂಪನಿಯ ಮಾರಾಟಗಾರರ ನಿರ್ವಹಣೆ ವ್ಯವಸ್ಥೆಯಲ್ಲಿ ನಿರ್ಬಂಧ ವಿಧಿಸಲಾಗುವುದು. ಇದರಿಂದ ಆ ಕಾರುಗಳನ್ನು ಹೊಚ್ಚ ಹೊಸ ವಾಹನಗಳೆಂದು ಮಾರಾಟ ಮಾಡದಂತೆ ನಿಷೇಧಿಸಲಾಗುವುದು. ನಮ್ಮ ಯಾವುದೇ ಶೋ ರೂಂಗಳಲ್ಲಿ ಆ ವಾಹನಗಳು ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಪ್ರವಾಹದಲ್ಲಿ ಹಾನಿಯಾಗಿರುವ ವಾಹನಗಳನ್ನು ಮತ್ತೆ ಶೋರೂಂಗಳಲ್ಲಿ ಮಾರಾಟಕ್ಕೆ ಇಡುವುದಿಲ್ಲ ಎಂದು ಕೇರಳ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ( ಕಾಡಾ ) ಕಾರ್ಯದರ್ಶಿ ಮನೋಜ್ ಕುರುಪ್ ಸಹ ತಿಳಿಸಿದ್ದಾರೆ. ಆ ವಾಹನಗಳು ವಿಮೆಯ ವಿಧಿಗಳ ವ್ಯಾಪ್ತಿಗೆ ಬರುವುದಿಲ್ಲ. ಅವುಗಳನ್ನು ಯಾವ ಡೀಲರ್ ಸಹ ಮಾರಾಟ ಮಾಡುವುದಿಲ್ಲ ಎಂದು ಸಹ ಅವರು ಹೇಳಿದ್ದಾರೆ. ಇನ್ನು, ಕೇರಳದಲ್ಲಿ ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಹಲವು ಆಟೋಮೊಬೈಲ್‌ ಕಂಪನಿಗಳ ಸುಮಾರು 1,000 ಹೊಚ್ಚ ಹೊಸ ಕಾರುಗಳು ಹಾಗೂ 7000 – 8000 ಗ್ರಾಹಕರ ಕಾರುಗಳು ಹಾನಿಗೀಡಾಗಿವೆ ಎಂದು ಉದ್ಯಮ ಮೂಲಗಳು ಮಾಹಿತಿ ನೀಡಿವೆ.

Comments are closed.