
ಅಮ್ರೋಹ: ಜಿಲ್ಲೆಯ ಗ್ರಾಮವೊಂದರಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯು ಗ್ರಾಮಸ್ಥರ ಪ್ರಚೋದನೆಯಿಂದ ಜೀವಂತ ಹಾವನ್ನು ನುಂಗಿ ಮೃತಪಟ್ಟಿದ್ದಾರೆ. ಆ ವ್ಯಕ್ತಿ ಹಾವನ್ನು ನುಂಗುವ ಮೊದಲು ಅದರ ಜತೆ ಆಟವಾಡುತ್ತಿದ್ದ ದೃಶ್ಯದ ವೀಡಿಯೊ ವೈರಲ್ ಆಗಿದೆ.
ಹಾವು ತಿಂದು ಮನೆಗೆ ಹೋದ ಮಹಿಪಾಲ್(40) ನಾಲ್ಕು ಗಂಟೆಯ ಬಳಿಕ ವಿಷವು ದೇಹಕ್ಕೆ ವ್ಯಾಪಿಸಿ ಮೃತಪಟ್ಟಿದ್ದಾರೆ.
ಮಹಿಪಾಲ್ ಸಿಕ್ಕಾಪಟ್ಟೆ ಕುಡಿದಿದ್ದಾಗ ರಸ್ತೆಯಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ಅದನ್ನು ಅವರು ಹಿಡಿದಿದ್ದಾರೆ. ಆಗ ಬಳಿ ಸೇರಿದ ಗ್ರಾಮಸ್ಥರು ಅದನ್ನು ಆಟವಾಡಿಸುವಂತೆ ಪ್ರಚೋದಿಸಿದ್ದಾರೆ. ಆಟವಾಡುತ್ತಿರುವುದನ್ನು ವೀಡಿಯೊದಲ್ಲಿ ರೆಕಾರ್ಡ್ ಕೂಡ ಮಾಡಿದ್ದಾರೆ.
ತಲೆ, ಭುಜಗಳ ಮೇಲೆಲ್ಲ ಹಾವನ್ನು ಆಡಿಸಿದ ಆತನಲ್ಲಿ ಹಾವನ್ನು ಬಾಯೊಳಗೆ ಹಾಕುವಂತೆ ಗ್ರಾಮಸ್ಥರು ಹೇಳಿದ್ದಾರೆ. ಆಗ ಮಹಿಪಾಲ್ ಬಾಯೊಳಗೆ ಹಾವನ್ನು ಹಾಕಿದ್ದು, ಹಾವು ಕೈ ಜಾರಿ ಬಾಯೊಳಗೆ ಹೋಗಿ ಶ್ವಾಸನಾಳ ತಲುಪಿದೆ. ಅಸ್ವಸ್ಥಗೊಂಡ ಅವರು ವಾಂತಿ ಮಾಡಲಾರಂಭಿಸಿದ್ದು, ಹಾವು ಮಾತ್ರ ಹೊರಗೆ ಬರಲೇ ಇಲ್ಲ. ಮನೆಗೆ ಹೋದ ಅವರನ್ನು ಆಸ್ಪತ್ರೆಗೆ ಕರೆದೊಯ್ಯದರೂ ಪ್ರಯೋಜನವಾಗಲಿಲ್ಲ.
ಮಹಿಪಾಲ್‌ಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಆ ವೀಡಿಯೊವನ್ನು ಪರಿಶೀಲಿಸುತ್ತೇವೆ. ನಿಜವಾಗಿಯೂ ಆತನನ್ನು ಗ್ರಾಮಸ್ಥರು ಪ್ರಚೋದಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಸಂತ್ರಸ್ತನ ಕುಟುಂಬದವರು ಈವರೆಗೆ ದೂರು ನೀಡಿಲ್ಲ ಎಂದು ರಜ್‌ತ್‌ಪುರ್ ಕೊತ್ವಾಲಿ ಠಾಣೆಯ ಅಧಿಕಾರಿ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ.
Comments are closed.