ರಾಷ್ಟ್ರೀಯ

ಕೇರಳದಲ್ಲಿ ಭಾರೀ ಮಳೆ: 8 ಸಾವಿರ ಕೋಟಿ ಹಾನಿ

Pinterest LinkedIn Tumblr


ಕೊಚ್ಚಿ: ಕೇರಳವನ್ನುಈ ಬಾರಿ ಕಾಡುತ್ತಿರುವ ಮಳೆ ಮತ್ತು ಪ್ರವಾಹದಿಂದ ಆಗಿರುವ ಬೆಳೆ ಮತ್ತು ಆಸ್ತಿ ಹಾನಿ ಪ್ರಮಾಣ ಎಂಟು ಸಾವಿರ ಕೋಟಿ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಹೊಸದಾಗಿ ರೆಡ್‌ ಅಲರ್ಟ್‌ ಜಾರಿಗೊಳಿಸಿದ್ದು, ಕೇಂದ್ರ ಜಲ ಆಯೋಗದಿಂದ ನಿಯೋಜನೆಗೊಂಡಿರುವ ಒಂಬತ್ತು ಪ್ರವಾಹ ನಿಗಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಸೇನೆಯ 52 ತಂಡಗಳ ಜತೆ ಎನ್‌ಜಿಒಗಳು ಕೈ ಜೋಡಿಸಿವೆ. ವಾಯುಪಡೆ, ನೌಕಾಪಡೆ, ಕರಾವಳಿ ಕಾವಲುಪಡೆ, ರಾಷ್ಟ್ರೀಯ ವಿಕೋಪ ನಿರ್ವಹಣೆ ತಂಡ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.

ಪಟ್ಟಂತಿಟ್ಟಿ ಜಿಲ್ಲೆ ಮಳೆ ಮತ್ತು ಪ್ರವಾಹದಿಂದ ಬಹಳಷ್ಟು ನಲುಗಿ ಹೋಗಿದೆ. ರಾಣ್ಣಿ, ಅರನ್ಮುಲ, ಕೊಯಿಂಚೇರಿ ಪಟ್ಟಣಗಳಲ್ಲಿ ಸಾವಿರಾರು ಮಂದಿ ಮನೆಯೊಳಗೆ ಸಿಲುಕಿಕೊಂಡಿದ್ದಾರೆ. ಪಟ್ಟಣಂತಿಟ್ಟ, ಎರ್ನಾಕುಲಂ, ತ್ರಿಶ್ಶೂರ್‌ಗಳಲ್ಲಿ ನೀರಿನ ಮಟ್ಟ ಇಪ್ಪತ್ತು ಅಡಿಗಳಿಗೆ ಏರಿಕೆಯಾಗಿದೆ.

ಕೊಚ್ಚಿಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿರುವುದು

ಪ್ರವಾಹದಿಂದ ಕಂಗೆಟ್ಟ ಜನ ಮನೆಗಳು, ಟೆರೇಸ್‌ಗಳು, ಎತ್ತರದ ಕಟ್ಟಡಗಳಲ್ಲಿದ್ದು ಆತಂಕದಲ್ಲಿದ್ದು, ಹಿಂದೆಂದು ಕಾಣದ ಹೀನಾಯ ಸ್ಥಿತಿ ಬಂದುರುವುದಾಗಿ ಮರುಗುತ್ತಿದ್ದಾರೆ.

ಕೊಚ್ಚಿ ವಿಮಾನ ನಿಲ್ದಾಣವು ಆಗಸ್ಟ್‌ 26ರವರೆಗೆ ಬಂದ್‌ ಆಗಿರುತ್ತದೆ. ತಿರುವನಂತಪುರದಿಂದ ರೈಲುಗಳ ಸಂಚಾರ ರದ್ದುಗೊಂಡಿದ್ದು, ಮೆಟ್ರೊ ಸೇವೆ ಕೂಡ ವ್ಯತ್ಯಯಗೊಂಡಿದೆ. ವಯನಾಡಿನಲ್ಲೇ ಇಪ್ಪತ್ತು ಸಾವಿರ ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನೆರವು ನೀಡುವಂತೆ ಪ್ರಧಾನಿ ಮೋದಿ ಮತ್ತು ಸಂಬಂಧಿಸಿದ ಕೇಂದ್ರದ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಕೇಂದ್ರವು ಹೆಚ್ಚುವರಿಯಾಗಿ ಸಾವಿರ ಸಿಬ್ಬಂದಿಯನ್ನು ಒಳಗೊಂಡ 35 ವಿಕೋಪ ನಿರ್ವಹಣಾ ತಂಡಗಳನ್ನು ಕೇರಳಕ್ಕೆ ಕಳಿಸಲು ನಿರ್ಧರಿಸಿದೆ.

Comments are closed.