ರಾಷ್ಟ್ರೀಯ

ಕೇರಳದಲ್ಲಿ ವರುಣನ ರೌದ್ರಾವತಾರಕ್ಕೆ ಕೇವಲ 24 ಗಂಟೆಯಲ್ಲಿ 106 ಮಂದಿ ಸಾವು; ಏರುತ್ತಲಿದೆ ಸಾವಿನ ಸಂಖ್ಯೆ

Pinterest LinkedIn Tumblr

ತಿರುವನಂತಪುರಂ: ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ದೇವರನಾಡಿನಲ್ಲಿ ಮಳೆಯಿಂದಾಗಿ ಬರೊಬ್ಬರಿ 106 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಕೇರಳದ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಮಾಹಿತಿ ನೀಡಿದ್ದು, ಗುರುವಾರದ ವೇಳೆಗೆ ಕೇರದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು ಎಂದು ಹೇಳಲಾಗಿತ್ತು. ಇದೀಗ ಸಂಖ್ಯೆಯನ್ನು ಎಸ್ ಟಿಆರ್ ಎಫ್ ಪರಿಷ್ಕರಿಸಿದ್ದು, ಗುರುವಾರ ರಾತ್ರಿ ವೇಳೆಗೆ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಇನ್ನು ಸಂತ್ರಸ್ತರ ರಕ್ಷಣೆಗೆ ಭಾರತೀಯ ಸೇನೆಯ ಕಾಲ್ದಳ, ವಾಯುದಳ ಮತ್ತು ನೌಕಾದಳಗಳ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದರೂ, ಸಾವಿನ ಸಂಖ್ಯೆ ಮಾತ್ರ ದಿನೇ ದಿನೇ ಏರಿಕೆಯಾಗುತ್ತಲೇ ಇದೆ.

ಹೀಗಾಗಿ ಕೇರಳಕ್ಕೆ ಹೆಚ್ಚುವರಿಯಾಗಿ 43 ಎನ್ ಡಿಆರ್ ಎಫ್ ತಂಡಗಳನ್ನು ರವಾನೆ ಮಾಡಲಾಗಿದ್ದು, ಇದರ ಜೊತೆಗೆ 420 ಸಿಬ್ಬಂದಿಗಳು, 23 ಹೆಲಿಕಾಪ್ಟರ್ ಗಳನ್ನು ಮತ್ತು 200 ಯಾಂತ್ರಿಕ ಬೋಟ್ ಗಳನ್ನು ಕೇರಳಕ್ಕೆ ರವಾನೆ ಮಾಡಲು ನಿರ್ಧರಿಸಲಾಗಿದೆ. ಅಂತೆಯೇ ಕೊಚ್ಚಿ ವಿಮಾನ ನಿಲ್ದಾಣ ಆಗಸ್ಟ್ 26ರವರೆಗೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಇನ್ನು ಪ್ರವಾಹ ಪೀಡಿತ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಖುದ್ದು ಮೋದಿ ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ.

Comments are closed.