ರಾಷ್ಟ್ರೀಯ

ವಾಜಪೇಯಿ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ: ಆಸ್ಪತ್ರೆಗೆ ಮೋದಿ ಮತ್ತೆ ಭೇಟಿ

Pinterest LinkedIn Tumblr

ಹೊಸದಿಲ್ಲಿ: ಮಾಜಿ ಪ್ರಧಾನಿ, ಭಾರತೀಯ ಜನತಾ ಪಕ್ಷದ ಹಿರಿಯ ನೇತಾರ ಅಟಲ್ ಬಿಹಾರಿ ವಾಜಪೇಯಿ (93) ಆರೋಗ್ಯ ಪರಿಸ್ಥಿತಿ ಇನ್ನಷ್ಟು ವಿಷಮಿಸಿದೆ. ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ವೈದ್ಯರು ಎರಡು ದಿನಗಳಿಂದ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ನಡುವೆ ಗುರುವಾರ ಮಧ್ಯಾಹ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಏಮ್ಸ್‌ಗೆ ಭೇಟಿ ನೀಡಿ ವೈದ್ಯರ ಜತೆ ಚರ್ಚೆ ನಡೆಸಿದರು. ಕಳೆದ 24 ಗಂಟೆಗಳಲ್ಲಿ ಮೋದಿ ಅವರು ಎರಡನೇ ಭೇಟಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮಂಗಳವಾರ ರಾತ್ರಿ ಕೂಡ ಮೋದಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ ಅಟಲ್‌ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.

ಬುಧವಾರ ಸಂಜೆ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ವಾಜಪೇಯಿ ಆರೋಗ್ಯದ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ ಸಂಜೆ 7.30ಕ್ಕೆ ಏಮ್ಸ್‌ಗೆ ಆಗಮಿಸಿದರು. ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಕೇಳಿ ತಿಳಿದುಕೊಂಡರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಆರೋಗ್ಯ ಬಗ್ಗೆ ತಿಳಿದುಕೊಂಡರು. ಅವರ ಸದ್ಯದ ಆರೋಗ್ಯ ಪರಿಸ್ಥಿತಿ, ನೀಡುತ್ತಿರುವ ಚಿಕಿತ್ಸೆ ಸ್ವತಃ ಮಾಹಿತಿ ಪಡೆದಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಏಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಮೂತ್ರ ಸಂಬಂಧಿ ಸಮಸ್ಯೆಗಳು, ಮಧುಮೇಹದ ಜತೆಗೆ ಡಿಮೆನ್ಷಿಯಾ ಸಮಸ್ಯೆಗಳನ್ನು ಎದುರಿಸುತ್ತಿರುವ ವಾಜಪೇಯಿ ಆರೋಗ್ಯ ವಿಷಮಿಸಿದ ಕಾರಣ ಜೂ.11ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯಕ್ಕೆ ವಾಜಪೇಯಿ ಅವರ ಒಂದೇ ಒಂದು ಕಿಡ್ನಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. 2009ರಲ್ಲಿ ವಾಜಪೇಯಿ ಸ್ಟ್ರೋಕ್‌ಗೆ ಒಳಗಾಗಿದ್ದರು. ಅಂದಿನಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ.

Comments are closed.