ರಾಷ್ಟ್ರೀಯ

ಪ್ರಿಯಾಂಕಾ ವಾದ್ರಾ ರಾಯ್‌ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ?

Pinterest LinkedIn Tumblr


ಹೊಸದಿಲ್ಲಿ : ಮಾಜಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರತಿರೂಪ ಎಂಬಂತಿರುವ ಅವರ ಮೊಮ್ಮಗಳು ಪ್ರಿಯಾಂಕಾ ವಾದ್ರಾ 2019ರ ಲೋಕಸಭಾ ಚುನಾವಣೆಗೆ ತನ್ನ ತಾಯಿ ಸೋನಿಯಾ ಗಾಂಧಿ ಅವರ ರಾಯ್‌ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ?

ಹೌದು ಎನ್ನುತ್ತದೆ ಎಎನ್‌ಐ ವರದಿ. ಅಂತೆಯೇ ಈ ಬಗ್ಗೆ ಬೇಗನೆ ನಿರ್ಧಾರ ಹೊರಬೀಳಲಿದೆ ಎಂದು ಎಎನ್‌ಐ ಹೇಳಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಎಂದಿನಂತೆ, ನಿರಂತರ ನಾಲ್ಕನೇ ಬಾರಿಗೆ, ತಮ್ಮ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ; ಆದರೆ ರಾಯ್‌ ಬರೇಲಿ ಕ್ಷೇತ್ರದಲ್ಲಿ ತನ್ನ ಅಮ್ಮ ಸೋನಿಯಾ ಗಾಂಧಿ ಅವರ ಸ್ಥಾನದಲ್ಲಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ರಾಹುಲ್‌ ಗಾಂಧಿ ಅವರು ಅಮೇಠಿ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದು 2004ರಲ್ಲಿ. ಅನಂತರ 2009 ಮತ್ತು 2014ರಲ್ಲಿ ಅವರು ಈ ಕ್ಷೇತ್ರದಲ್ಲಿನ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದರು.

ರಾಯ್‌ ಬರೇಲಿ ಕ್ಷೇತ್ರದಿಂದ ಸೋನಿಯಾ ಅವರು 2004, 2009 ಮತ್ತು 2014ರ ಲೋಕಸಭೆಗೆ ಗೆದ್ದು ಬಂದಿದ್ದರು. 1999ರಲ್ಲಿ ಸೋನಿಯಾ ಅವರು ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕಾರಣವನ್ನು ಪ್ರವೇಶಿಸಿದ್ದರು. ಅನಂತರದಲ್ಲಿ ಅವರು ಆ ಕ್ಷೇತ್ರವನ್ನು ತಮ್ಮ ಪುತ್ರ ರಾಹುಲ್‌ಗಾಗಿ ಬಿಟ್ಟುಕೊಟ್ಟಿದ್ದರು.

ಹಾಗೆ ನೋಡಿದರೆ ಅಮೇಠಿ ಕ್ಷೇತ್ರ ನೆಹರೂ – ಗಾಂಧಿ ಕುಟುಂಬದ ಭದ್ರ ಕೋಟೆಯೇ ಆಗಿದೆ. ಈ ಕ್ಷೇತ್ರದಿಂದ ಗಾಂಧಿ ಕುಟುಂಬದ ನಾಲ್ವರು ತಮ್ಮ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರ ಚಿಕ್ಕಪ್ಪ, ಮೇನಕಾ ಗಾಂಧಿಯ ಪತಿ, ಸಂಜಯ್‌ ಗಾಂಧಿ ಅವರು ತುರ್ತು ಪರಿಸ್ಥಿತಿ ಬಳಿಕ 1977ರ ಲೋಕಸಭಾ ಚುನಾವಣೆಯನ್ನು ಈ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದರು. ಆದರೆ ಸೋತಿದ್ದರು. ಆ ಬಳಿಕ 1980ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಲೋಕಸಭೆಗೆ ಗೆದ್ದು ಬಂದಿದ್ದರು.

ಸಂಜಯ್‌ ಗಾಂಧಿ ನಿಧನಾಂತರ ಅವರ ಹಿರಿಯ ಸಹೋದರ, ರಾಹುಲ್‌ ಗಾಂಧಿಯ ತಂದೆ, ರಾಜೀವ್‌ ಗಾಂಧಿ ಅವರು 1981, 1984 ಮತ್ತು 1989ರಲ್ಲಿ ಇದೇ ಕ್ಷೇತ್ರದಿಂದ ಲೋಕಸಭೆಗೆ ನಿರಂತರವಾಗಿ ಗೆದ್ದು ಬಂದಿದ್ದರು. ಅದಾಗಿ 1991ರಲ್ಲೂ ರಾಜೀವ್‌ ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು.

ಸೋನಿಯಾ ಗಾಂಧಿ ಅವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲದ ಕಾರಣ ಅವರು ತಮ್ಮ ರಾಯ್‌ಬರೇಲಿ ಕ್ಷೇತ್ರವನ್ನು ಮಗಳು ಪ್ರಿಯಾಂಕಾ ವಾದ್ರಾಗೆ ಬಿಟ್ಟುಕೊಡುತ್ತಿರುವುದಾಗಿ ವರದಿಗಳು ತಿಳಿಸಿವೆ.

ಪ್ರಿಯಾಂಕಾ ವಾದ್ರಾ ಅವರು ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರಾಭಿಯಾನವನ್ನು ಕೈಗೊಂಡಿದ್ದು ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದಾರೆ. ಲೋಕಸಭಾ ಚುನಾವಣೆಗೆ ನಿಂತಲ್ಲಿ ಇದರಿಂದ ಆಕೆಗೆ ಬಹುವಾಗಿ ಪ್ರಯೋಜನವಾಗಲಿದೆ ಎಂದು ತಿಳಿಯಲಾಗಿದೆ.

Comments are closed.