ರಾಷ್ಟ್ರೀಯ

ಆಶ್ರಯ ಗೃಹದಲ್ಲಿ ಲೈಂಗಿಕ ಹಗರಣ ನಾಚಿಕೆಗೇಡು: ನಿತೀಶ್‌ ಕುಮಾರ್

Pinterest LinkedIn Tumblr


ಪಾಟ್ನಾ: ಮುಜಾಫರ್‌ಪುರ್ ಆಶ್ರಯ ಗೃಹದಲ್ಲಿ ನಡೆದ ಲೈಂಗಿಕ ಹಗರಣ ಪ್ರಕರಣ ನಮಗೆ ಮುಜುಗರ ಉಂಟುಮಾಡಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್‌ ಹೇಳಿದ್ದಾರೆ.

ಆಶ್ರಯ ಮನೆಯಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ನಮಗೆ ಮುಜುಗರದ ಜತೆಗೆ ಅಪರಾಧಿ ಭಾವನೆ ಹೊಂದುವಂತೆ ಮಾಡಿದೆ. ಅಲ್ಲಿ ಅಂತಹ ಕೃತ್ಯ ನಡೆಯಬಾರದಿತ್ತು. ಮುಂದೆ ಆ ರೀತಿಯಾಗದಂತೆ ಮತ್ತು ಸೂಕ್ತ ಭದ್ರತೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ನಿತೀಶ್‌ ತಿಳಿಸಿದ್ದಾರೆ.

ಪಾಟ್ನಾದಲ್ಲಿ ಯುವತಿಯರ ಕಲ್ಯಾಣ ಯೋಜನೆ ಮುಖ್ಯಮಂತ್ರಿ ಕನ್ಯಾ ಉತ್ಥಾನ್‌ ಯೋಜನಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಿತೀಶ್‌ ಕುಮಾರ್, ಮುಜಾಫರ್‌ಪುರ್‌ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಹೈಕೋರ್ಟ್‌ ನಿರ್ದೇಶನದಲ್ಲಿ ಸಿಬಿಐ ತನಿಖೆ ನಡೆಸಲಾಗುತ್ತದೆ. ಜತೆಗೆ ಸೂಕ್ತ ಕ್ರಮಕ್ಕೆ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ಅವರಿಗೂ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಮುಜಾಫರ್‌ಪುರ್‌ ಆಶ್ರಯ ಗೃಹದಲ್ಲಿದ್ದ ಸುಮಾರು 34 ಯುವತಿಯರ ಮೇಲೆ ಲೈಂಗಿಕ ಹಲ್ಲೆ ಮತ್ತು ದೌರ್ಜನ್ಯ ನಡೆದಿರುವುದು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರ ಪೊಲೀಸರಿಗೆ ಸೂಚಿಸಿತ್ತು.

Comments are closed.