ರಾಷ್ಟ್ರೀಯ

ವಿಜಯ್ ಮಲ್ಯರನ್ನು ಹಾಕುವ ಜೈಲಿನ ವಿಡಿಯೋ ಕಳುಹಿಸಿ: ಲಂಡನ್​ ಕೋರ್ಟ್​

Pinterest LinkedIn Tumblr


ನವದೆಹಲಿ: ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅವರನ್ನು ಯಾವ ಜೈಲಿನಲ್ಲಿಡುತ್ತೀರಾ? ಅದರ ವಿಡಿಯೋ ಮಾಡಿ ಕಳುಹಿಸಿ ಎಂದು ಲಂಡನ್​ ನ್ಯಾಯಾಧೀಶರು ಆದೇಶಿಸಿದ್ದಾರೆ.

ಆರ್ಥಿಕ ವಂಚನೆಯ ಆರೋಪ ಎದುರಿಸುತ್ತಿರುವ ಮಲ್ಯರನ್ನು ಭಾರತಕ್ಕೆ ​ ಹಸ್ತಾಂತರಿಸುವ ಪ್ರಕರಣಕ್ಕೆ ಸಂಬಂಧಿಸಿ ಮಲ್ಯ ಮುಂಬೈನ ಅರ್ಥರ್​ ಜೈಲಿನಲ್ಲಿ ಭದ್ರತೆ ಇಲ್ಲವೆಂದು ಲಂಡನ್​ನ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಎಮಾ ಅರ್ಬೋಟ್​ನಾಟ್​, ಭಾರತದ ಅಧಿಕಾರಿಗಳು ನೀಡಿರುವ ಚಿತ್ರಗಳನ್ನು ಜೈಲಿನ ಭದ್ರತೆಯ ಕುರಿತು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಮಧ್ಯಾಹ್ನದ ವೇಳೆ ವಿಡಿಯೋ ಚಿತ್ರೀಕರಿಸಿ. ಮಲ್ಯರನ್ನು ಇರಿಸುವ ಕೊಠಡಿಯ ಕಿಟಕಿಯಿಂದ ಸೂರ್ಯನ ಕಿರಣಗಳು ಬರುತ್ತವೆಯೇ ಎಂದು ನಾನು ನೋಡಬೇಕು. ಹಾಗಾಗಿ ಸೂರ್ಯನಿರುವಾಗ ಅಂದರೆ ಮಧ್ಯಾಹ್ನದ ವೇಳೆ ವಿಡಿಯೋ ಚಿತ್ರೀಕರಿಸಿ ಎಂದು ತಿಳಿಸಿದ್ದಾರೆ.

ಹಾಗೆಯೇ, 62 ವರ್ಷದ ಮದ್ಯದ ದೊರೆ ಮಲ್ಯಗೆ ಲಂಡನ್​ ಕೋರ್ಟ್​ ಆರು ವಾರ ರಿಲೀಫ್ ನೀಡಿದ್ದು, ಸೆ.12ಕ್ಕೆ ವಿಚಾರಣೆ ಮುಂದೂಡಿದೆ. ಪುತ್ರ ಸಿದ್ಧಾರ್ಥ್​ ಜತೆ ನ್ಯಾಯಾಲಯಕ್ಕೆ ಬಂದ ಮಲ್ಯ ವಿಚಾರಣೆಗೆ ಹಾಜರಾಗಿದ್ದರು.

ಮಲ್ಯರನ್ನು ಭಾರತದ ವಶಕ್ಕೆ ನೀಡಬೇಕೆಂಬ ಮನವಿಗೆ ಲಂಡನ್​ ನ್ಯಾಯಾಲಯ ಸಮ್ಮತಿಸುವ ಸಾಧ್ಯತೆ ಇದೆ ಎಂಬ ವಿಶ್ವಾಸದಿಂದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳ ತಂಡ ಲಂಡನ್​ಗೆ ತೆರಳಿತ್ತು.

Comments are closed.