ರಾಷ್ಟ್ರೀಯ

ಹಸಿವಿನಿಂದ ಬಳಲಿ ಮೂವರು ಮಕ್ಕಳು ಸಾವು

Pinterest LinkedIn Tumblr


ನವದೆಹಲಿ: ಹಸಿವಿನಿಂದ ಬಳಲಿ ಒಂದೇ ಕುಟುಂಬದ ಮೂವರು ಕಂದಮ್ಮಗಳು ಮೃತಪಟ್ಟಿರುವ ಆತಂಕಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಮರಣೋತ್ತರ ಪರೀಕ್ಷೆ ನಂತರ ಮಾನಸಿ (8), ಪಾರೋ(5) ಮತ್ತು ಸುಖೊ (2)ಎಂಬ ಮಕ್ಕಳು ಹಸಿವಿನಿಂದ ಬಳಲಿ ಮೃತಪಟ್ಟಿರುವುದು ಖಾತರಿಯಾಗಿದೆ.

ಪೂರ್ವ ದೆಹಲಿಯ ಮಂಡವಾಲಿಯಲ್ಲಿ ಮೂರೂ ಮಕ್ಕಳು ವಾಂತಿ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರ ಪರೀಕ್ಷೆ ನಂತರ ಮಕ್ಕಳು ಮೃತಪಟ್ಟಿರುವುದು ತಿಳಿದು ಬಂದಿದೆ.

ಪ್ರಾಥಮಿಕ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಕ್ಕಳ ದೇಹದಲ್ಲಿ ಆಹಾರ ಹಾಗೂ ನೀರಿನ ಅಂಶವೇ ಇಲ್ಲದೆ ಮಕ್ಕಳು ಹಸಿವಿನಿಂದಲೇ ಮೃತಪಟ್ಟಿರುವುದು ಖಚಿತವಾಗಿದೆ. ವರದಿಯನ್ನು ವಿಭಾಗೀಯ ಆಯುಕ್ತರಿಗೆ ಕಳುಹಿಸಲಾಗಿದೆ ಎಂದು ಲಾಲ್​ ಬಹದ್ದೂರ್​ ಶಾಸ್ತ್ರಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಅಮಿತಾ ಸಕ್ಸೇನಾ ತಿಳಿಸಿದ್ದಾರೆ.

ಮೃತ ಮಕ್ಕಳ ತಂದೆ ಮಂಗಲ್​ ಸ್ನೇಹಿತನ ಬಳಿ ರಿಕ್ಷಾವೊಂದನ್ನು ಪಡೆದು, ಅದನ್ನು ಎಳೆದು ಜೀವನ ಸಾಗಿಸುತ್ತಿದ್ದ. ಈ ಕೆಲಸದ ಮೂಲಕ ಪ್ರತಿದಿನ 50 ರಿಂದ 60 ರೂ. ಸಂಪಾದಿಸುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಆತನ ರಿಕ್ಷಾ ಕಳುವಾದ್ದರಿಂದ ಜೀವನ ನಡೆಸಲು ಹಾಗೂ ಒಂದು ಹೊತ್ತು ಊಟಕ್ಕೂ ಕಷ್ಟಪಡುವ ಸ್ಥಿತಿ ಎದುರಾಯಿತು. ಗುಡಿಸಲಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಕಳೆದ ಶನಿವಾರವಷ್ಟೇ ಬೇರೆ ರೂಂ ಒಂದಕ್ಕೆ ತೆರಳಿದ್ದರು. ಕೆಲಸ ಹುಡುಕಲು ಮನೆಯಿಂದ ತೆರಳಿದ ಮಂಗಲ್​ ಆನಿವಾರದಿಂದ ಮನೆಗೆ ವಾಪಸಾಗಿರಲಿಲ್ಲ. ಮಕ್ಕಳ ತಾಯಿ ಬೀನಾ ಬುದ್ಧಿಮಾಂದ್ಯಳಾಗಿದ್ದರಿಂದ ಮಕ್ಕಳ ಬಗ್ಗೆ ಕಾಳಜಿ ವಹಿಸುವವರು ಯಾರೂ ಇರಲಿಲ್ಲ ಎನ್ನಲಾಗಿದೆ.

ಪೊಲೀಸರು ಸ್ಥಳೀಯರನ್ನು ವಿಚಾರಿಸಿದಾಗ, 10 ವರ್ಷದ ಹಿಂದೆ ಬೀನಾಳನ್ನು ಮದುವೆಯಾಗಿ ದೆಹಲಿಗೆ ಕರೆತಂದಿದ್ದ. ಮಂಗಲ್​ ತಾನು ದುಡಿದ ಹಣವನ್ನು ಮದ್ಯಪಾನಕ್ಕೆ ಬಳಸುತ್ತಿದ್ದ. ಹಾಗಾಗಿ ಆತ ಗುಡಿಸಲು ಖಾಲಿ ಮಾಡುವ ಮುಂಚೆ ಅಕ್ಕಪಕ್ಕದ ಮನೆಯವರು ನೀಡುತ್ತಿದ್ದ ಊಟ ತಿಂದು ಅವರ ಕುಟುಂಬ ಜೀವನ ಸಾಗಿಸುತ್ತಿತ್ತು ಎಂದು ಹೇಳಿದ್ದಾರೆ.

Comments are closed.