ರಾಷ್ಟ್ರೀಯ

ಮೃತ ಪತ್ನಿಯ ಪ್ರತಿಮೆ ಸ್ಥಾಪಿಸಿ ಪ್ರತಿನಿತ್ಯ ಪೂಜಿಸುತ್ತಿರುವ ಮಹಾನ್ ಪತಿ !

Pinterest LinkedIn Tumblr

ಕಾಂಚೀಪುರಂ: ಅನೇಕ ಪತಿಯರು ಬದುಕಿದ್ದಾಗಲೇ ತನ್ನ ಪತ್ನಿಯನ್ನು ಕಡೆಗಣಿಸುತ್ತಾರೆ. ಆದರೆ ಇಲ್ಲೊಬ್ಬ ಪತಿ ಆಕೆ ಮೃತಪಟ್ಟ ಬಳಿಕವೂ ಅವಳ ನೆನಪಿನಲ್ಲಿ ಅವಳಂತೆಯೇ ಇರುವ ಪ್ರತಿಮೆಯನ್ನು ನಿರ್ಮಿಸಿದ್ದಾನೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಚೆಂಗಲ್‌ಪಟ್ಟು ಬಳಿಯ ಮಮಂಡೂರು ಪ್ರದೇಶದಲ್ಲಿ ಆಸೈಥಂಪಿ ಎನ್ನುವ ವ್ಯಕ್ತಿ, ಪತ್ನಿಯ ಮೂರ್ತಿಯನ್ನು ಸ್ಥಾಪಿಸಿದ್ದು ನಿತ್ಯ ಇದನ್ನು ಪೂಜಿಸುತ್ತಿದ್ದಾನೆ.

ಜೂನ್ 27ರಂದು ತನ್ನ ಸಂಬಂಧಿಕರಿಗೆ ಹಾಗೂ ಗೆಳೆಯರಿಗೆ ತನ್ನ ಮನೆಗೆ ಬರುವಂತೆ ಆಸೈಥಂಪಿ ಆಹ್ವಾನಿಸಿದ್ದ. ಅವರ ಮನೆಗೆ ಹೋಗಿದ್ದ ಜನತೆಗೆ ಶಾಕ್ ಕಾದಿತ್ತು. ಯಾಕೆಂದರೆ, ಪತ್ನಿಯ ಪ್ರತಿಮೆ ನಿರ್ಮಿಸಿದ್ದ ಪತಿ ಅದರ ಉದ್ಘಾಟನಾ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಿ ಉದ್ಘಾಟನೆಗೊಳಿಸಿದ್ದ.

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮೆಟ್ಟುಪ್ಪಟ್ಟಿ ಗ್ರಾಮದ ಆಸೈಥಂಪಿ 1977ರಲ್ಲಿ ಪೆರಿಯಪಿರಟ್ಟಿ ಅಮ್ಮಾಳ್‌ ಎಂಬ ಸಂಬಂಧಿಕರನ್ನೇ ಮದುವೆಯಾಗಿದ್ದ. ಅವರಿಗೆ ಎರಡು ಹೆಣ್ಣು ಮಕ್ಕಳಿದ್ದವು. ಬಳಿಕ ಅಲ್ಲಿಂದ ಕೆಲಸಕ್ಕಾಗಿ ಅರಸಿ ಚೆನ್ನೈಗೆ ಹೋದ ಆತ, ಪತ್ನಿಯ ಸಲಹೆಯೊಂದಿಗೆ ದಿನಸಿ ಅಂಗಡಿ ತೆರೆಯುತ್ತಾರೆ. ಅಲ್ಲದೆ, ಅಮ್ಮಾಳ್‌ ಸಲಹೆಯಂತೆ ಕೇಬಲ್ ಉದ್ಯಮವನ್ನೂ ಆಸೈಥಂಪಿ ಆರಂಭಿಸಿದ್ದು, ಇದರಿಂದ ಸಾಕಷ್ಟು ಆದಾಯ ಬಂದಿದೆ. ನಂತರ, ಮನೆ ನಿರ್ಮಿಸಲು ಇಬ್ಬರೂ ತೀರ್ಮಾನಿಸಿದ್ದಾರೆ. ಆದರೆ, ಈ ವೇಳೆ ಪತ್ನಿಗೆ ಕ್ಯಾನ್ಸರ್‌ ಇರುವುದು ಗೊತ್ತಾಗಿದ್ದು, ನಂತರ ಇಡೀ ಕುಟುಂಬದ ಸಮತೋಲನವೇ ತಪ್ಪಿ ಹೋಗಿದೆ ಎಂದು ಆಸೈಥಂಪಿ ಬೇಸರ ವ್ಯಕ್ತಪಡಿಸುತ್ತಾರೆ.

ಅಲ್ಲದೆ, ಇಂತಹ ಸಮಯದಲ್ಲೂ ತಮ್ಮ ಜತೆಯಲ್ಲಿಯೇ ಇರುವುದಾಗಿ ಪತ್ನಿ ಹೇಳಿದ್ದಳು. ಬಳಿಕ, ಆಗಸ್ಟ್ 2017ರಲ್ಲಿ ಆಕೆ ಮೃತಪಟ್ಟಿದ್ದು ನಂತರ ಕೆಲವೇ ದಿನಗಳಲ್ಲಿ ತನ್ನ ಪತ್ನಿಯ ಪ್ರತಿಮೆ ನಿರ್ಮಿಸಲು ನಾನು ನಿರ್ಧರಿಸಿದೆ. ಆಕೆ ಮೃತಪಟ್ಟ 16 ದಿನಗಳಲ್ಲೀ ಈ ಬಗ್ಗೆ ಮಾಮಲ್ಲಪುರಂನಲ್ಲಿರುವ ಶಿಲ್ಪಿಯೊಬ್ಬರ ಸಲಹೆ ಪಡೆದೆವು. ಮೂರ್ತಿಗೆ ಯಾವ ಕಲ್ಲಿನಿಂದ ರಚಿಸಬೇಕು ಎಂಬುದರ ಬಗ್ಗೆಯೂ ನಿರ್ಧಾರ ಮಾಡಿದೆವು ಎಂದು ಪತಿ ಹೇಳಿಕೊಂಡಿದ್ದಾನೆ. ನಂತರ ಪತ್ನಿ ಮೃತಪಟ್ಟ 10 ತಿಂಗಳುಗಳಲ್ಲಿ ಪ್ರತಿಮೆಯನ್ನು ಪೂರ್ತಿಯಾಗಿ ನಿರ್ಮಿಸಿದ್ದಾರೆ.

ಅಲ್ಲದೆ, ಪ್ರತಿನಿತ್ಯ ಎರಡು ಗಂಟೆಗಳ ಕಾಲ ನಾನು ಪ್ರತಿಮೆಯೊಂದಿಗೆ ಮಾತನಾಡುತ್ತಿರುತ್ತೇನೆ. ಇದರಿಂದ, ನಾನು ಯುವಕನಂತೆ ಖುಷಿಯಾಗಿದ್ದೇನೆ ಎಂದು ಆಸೈಥಂಪಿ ಹೇಳಿಕೊಂಡಿದ್ದಾನೆ. ಇನ್ನು. ತನ್ನ ಹೆಂಡತಿಯ ಪ್ರತಿಮೆಗೆ ನಿತ್ಯ ಪೂಜೆಯನ್ನು ಮಾಡುತ್ತಿರುವುದಾಗಿಯೂ ತಮಿಳುನಾಡಿನ ಈ ಆದರ್ಶ ಪತಿ ತಿಳಿಸಿದ್ದಾನೆ.

Comments are closed.