ರಾಷ್ಟ್ರೀಯ

ಬಾಡಿಗೆ ಕೊಡಲಿಲ್ಲವೆಂದು 3 ಕೋಟಿ ಮೌಲ್ಯದ ಪುಸ್ತಕಗಳ ಕಳ್ಳತನ!

Pinterest LinkedIn Tumblr


ಹೈದರಾಬಾದ್: ನಗರದಲ್ಲಿ 3 ಕೋಟಿ ರೂ. 24 ಲಕ್ಷ ರೂ. ಗೂ ಅಧಿಕ ಮೊತ್ತದ ಪುಸ್ತಕಗಳನ್ನು ಕದ್ದಿರುವ ಆರೋಪದ ಮೇರೆಗೆ 73 ವರ್ಷದ ಗೋಡೌನ್‌ವೊಂದರ ಮಾಲೀಕ ಹಾಗೂ ಆತನ ಪುತ್ರನನ್ನು ಬಂಧಿಸಲಾಗಿದೆ. ಆ ಗೋಡೌನ್‌ ಅನ್ನು ಬಾಡಿಗೆಗೆ ಪಡೆದಿದ್ದ ವ್ಯಕ್ತಿ ಕಳೆದ 14 ತಿಂಗಳಿಂದ ಬಾಡಿಗೆಯನ್ನು ಕಟ್ಟಲು ವಿಫಲವಾದ ಹಿನ್ನೆಲೆ ಅವನಿಗೆ ಸೇರಿದ ಪುಸ್ತಕಗಳನ್ನು ಇಬ್ಬರು ಕದ್ದಿದ್ದಾರೆ.

ಇನ್ನು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಚಿಗುಡ ನಿವಾಸಿ ಪಿ.ನರಸಿಂಹ ರೆಡ್ಡಿ (73), ಪುತ್ರ ಶ್ರೀನಿವಾಸ್ ರೆಡ್ಡಿ ( 45 ) ಹಾಗೂ ಈ ಬುಕ್ಸ್‌ಗಳನ್ನು ಮಾರಿದ ಆರೋಪದ ಮೇರೆಗೆ ಮೊಹಮ್ಮದ್ ರಾಜಿಯುದ್ದಿನ್ (48) ಸೇರಿ ಮೂವರನ್ನು ಬಂಧಿಸಲಾಗಿದೆ. ಆದರೆ, ಮತ್ತೊಬ್ಬ ಆರೋಪಿ ಮುಂಬಯಿಯ ಪುಸ್ತಕದ ಅಂಗಡಿಯ ಮಾಲೀಕ ಧಾಮ್‌ಜೀ ನಾಪತ್ತೆಯಾಗಿದ್ದು, ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿ ನರಸಿಂಹ ರೆಡ್ಡಿಯಿಂದ ಗೋಡೌನ್‌ ಅನ್ನು ತಿಂಗಳಿಗೆ 50 ಸಾವಿರ ರೂ. ನಂತೆ ಬಾಡಿಗೆಗೆ ಪಡೆದಿದ್ದ ದೂರುದಾರ ನಿಕೇತನ್ ದೇವಾಡಿಗ ತಮ್ಮ ಬಳಿ 1 ಲಕ್ಷ 29 ಸಾವಿರ ಪುಸ್ತಕಗಳನ್ನು ಅಲ್ಲಿ ಇಟ್ಟುಕೊಂಡಿದ್ದರು. ಆದರೆ ಹಣಕಾಸಿನ ತೊಂದರೆಯಲ್ಲಿದ್ದ ನಿಕೇತನ್, ಮೆಡ್ಚಾಲ್‌ ಪ್ರದೇಶದ ಗೋಡೌನ್‌ಗೆ ಕಳೆದ 14 ತಿಂಗಳಿಂದ ಬಾಡಿಗೆ ನೀಡದೆ 7 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಮಾಲೀಕ ನರಸಿಂಹ ರೆಡ್ಡಿ ಪದೇ ಪದೇ ಒತ್ತಾಯಿಸಿದ್ದರೂ ಸಹ ಹಣ ನೀಡಿರಲಿಲ್ಲ ಎಂದು ಜವಾಹರ್‌ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆ ಹಣವನ್ನು ವಾಪಸ್ ಪಡೆದುಕೊಳ್ಳಲು ಗೋಡೌನ್ ಮಾಲೀಕರಾದ ಅಪ್ಪ ಹಾಗೂ ಮಗ, ಜುಲೈ 4 ರಿಂದ ಜುಲೈ 7 ರವರೆಗೆ ಅಲ್ಲಿದ್ದ ಬುಕ್ಸ್‌ಗಳನ್ನು ಕಳ್ಳತನ ಮಾಡಿದ್ದಾರೆ. ನಂತರ, ಬೇಗಂಪೇಟೆಯಲ್ಲಿರುವ ಮೊಹಮ್ಮದ್ ರಾಜಿಯುದ್ದೀನ್‌ರ ಪುಸ್ತಕದ ಅಂಗಡಿಗೆ 10 ಟ್ರಕ್‌ಗಳಲ್ಲಿ ಇಬ್ಬರೂ ಸಾಗಿಸಿದ್ದಾರೆ. ಬಳಿಕ ಆರೋಪಿ ರಾಜಿಯುದ್ದೀನ್, ಎಲ್ಲ ಪುಸ್ತಕಗಳನ್ನು ಮುಂಬಯಿಯ ಆದಿನಾಥ್‌ ಬುಕ್‌ ಸೇಲ್ಸ್‌ ಮಾಲೀಕ ಧಾಮ್‌ಜೀಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ರಾಚಕೊಂಡ ಪೊಲೀಸರು ಧಾಮ್‌ಜೀಯ ಗೋಡೌನ್‌ ಅನ್ನು ಪತ್ತೆಹಚ್ಚಿದ್ದು, ಕದ್ದಿರುವ ಮಾಲುಗಳನ್ನು ಸೀಜ್ ಮಾಡಿದ್ದಾರೆ. ನಂತರ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 457 ಹಾಗೂ 380ರಡಿ ಬಂಧಿಸಲಾಗಿದೆ.

Comments are closed.