ರಾಷ್ಟ್ರೀಯ

ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 150 ಸೀಟು ಗೆಲ್ಲಬಹುದು: ಚಿದಂಬರಂ

Pinterest LinkedIn Tumblr


ಹೊಸದಿಲ್ಲಿ: ದೇಶದ 12 ರಾಜ್ಯಗಳಲ್ಲಿ ಕಾಂಗ್ರೆಸ್‌ ಈಗಲೂ ಪ್ರಬಲವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಿಂದ 150 ಸೀಟುಗಳನ್ನು ಗೆಲ್ಲಬಹುದು ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಉಳಿದ ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಗೆಲ್ಲಬಹುದಾಗಿದ್ದು, ಅವುಗಳೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತ ಚಿದಂಬರಂ ಈ ವಿಚಾರ ತಿಳಿಸಿದರೆಂದು ಎಎನ್‌ಐ ವರದಿ ತಿಳಿಸಿದೆ.

ಪ್ರಸ್ತುತ ಲೋಕಸಭೆಯಲ್ಲಿ ಕಾಂಗ್ರೆಸ್‌ ಕೇವಲ 48 ಸ್ಥಾನಗಳನ್ನು ಹೊಂದಿದೆ.

ಇದೇ ವೇಳೆ, ಜನತೆ ಕಾಂಗ್ರೆಸ್‌ನಲ್ಲಿ ವಿಶ್ವಾಸವಿರಿಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್‌ ಹೇಳಿದ್ದಾರೆ.

ಆರೆಸ್ಸೆಸ್‌ ಎದುರಿಸಲು ಒಗ್ಗಟ್ಟು ಅನಿವಾರ್ಯ: ಸೋನಿಯಾ ಗಾಂಧಿ

ಆರೆಸ್ಸೆಸ್‌ನ ಸಂಘಟನೆ ಮತ್ತು ಆರ್ಥಿಕ ಶಕ್ತಿಯನ್ನು ಎದುರಿಸಲು ಪ್ರತಿಪಕ್ಷಗಳು ಒಗ್ಗಟ್ಟಾಗಲೇ ಬೇಕು ಎಂದು ಕಾಂಗ್ರೆಸ್‌ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಪ್ರತಿಪಾದಿಸಿದರು.

ಎಲ್ಲ ಮುಖಂಡರು ಮತ್ತು ಪಕ್ಷಗಳು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಬದಿಗಿರಿಸಿ ಹೋರಾಡಿದರೆ ಮಾತ್ರ ಬಿಜೆಪಿ-ಆರೆಸ್ಸೆಸ್‌ ಅನ್ನು ಎದುರಿಸಬಹುದು ಎಂದು ಅವರು ನುಡಿದರು.

ಜನಾರ್ದನ್‌ ದ್ವಿವೇದಿ, ದಿಗ್ವಿಜಯ್ ಸಿಂಗ್‌ ಔಟ್‌:
ಹಿರಿಯ ನಾಯಕರಾದ ಜನಾರ್ದನ್ ದ್ವಿವೇದಿ ಮತ್ತು ದಿಗ್ವಿಜಯ್ ಸಿಂಗ್ ಅವರನ್ನು ಈ ಬಾರಿಯ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಿಂದ ಹೊರಗಿಡಲಾಗಿದೆ. ಈ ಬಾರಿಯ ಸಭೆಗೆ ಆಹ್ವಾನವಿದ್ದರೂ ಈ ಮುಖಂಡರು ಹಾಜರಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

Comments are closed.