ರಾಷ್ಟ್ರೀಯ

ಅಪ್ರಾಪ್ತೆಯನ್ನು ಅತ್ಯಾಚಾರ ಎಸಗಿದ ಮಾದಕ ವ್ಯಸನಿ

Pinterest LinkedIn Tumblr


ನವದೆಹಲಿ: ಆರು ವರ್ಷದ ನಿರಾಶ್ರಿತ ಬಾಲಕಿ ಮೇಲೆ 24 ವರ್ಷದ ಮಾದಕ ವ್ಯಸನಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯು ತನ್ನ ಪಾಲಕರೊಂದಿಗೆ ಫುಟ್‌ಪಾತ್‌ ಸಮೀಪದ ದೇವಸ್ತಾನದಲ್ಲಿ ವಾಸಿಸುತ್ತಿದ್ದಳು. ಆರೋಪಿಯು ಕೂಡ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಅಲ್ಲೇ ಇದ್ದ ಅಪ್ರಾಪ್ತೆಯನ್ನು ಅಪಹರಿಸಿ ಕೃತ್ಯ ಎಸಗಿದ್ದಾನೆ.

ಜು. 14ರಂದು ಮಿಂಟೋ ರಸ್ತೆಯ ಕಾಳಿ ಮಂದಿರದ ಬಳಿ ಅಪ್ರಾಪ್ತೆ ಆಟವಾಡುತ್ತಿದ್ದಾಗ ಅಪ್ರಾಪ್ತೆಯನ್ನು ಅಪಹರಿಸಿದ್ದಾನೆ. ಅದಾದ ಬಳಿಕ ಆಕೆಯನ್ನು ಪಾಲಕರು ಹುಡುಕಾಡಿದಾಗ ರಾತ್ರಿ 11.30ರ ಸುಮಾರಿಗೆ ರಕ್ತದ ಮಡುವಿನಲ್ಲಿ ಬಾಲಕಿ ಪತ್ತೆಯಾಗಿದ್ದಳು.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ಆಕೆಯ ಪರಿಸ್ಥಿತಿ ಗಂಭೀರವಾಗಿರುವ ಕುರಿತು ತಿಳಿಸಿದ್ದಾರೆ. ಬಾಲಕಿಯ ಗುಪ್ತಾಂಗಗಳಲ್ಲಿ ಹಲವಾರು ಗಾಯಗಳಾಗಿದ್ದು, ರಕ್ತಸ್ರಾವ ಉಂಟಾಗಿದೆ. ಸುಮಾರು 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ದೆಹಲಿ ಮಹಿಳಾ ಆಯೋಗ ತಿಳಿಸಿದೆ.

ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಂತ್ರಸ್ತೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಪಾಲಕರಿಗೆ ತಿಳಿಸಿದ್ದಾರೆ. ಘಟನೆ ಕುರಿತು ಟ್ವೀಟ್‌ ಮಾಡಿ ಅಪರಾಧಿಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿದ್ದಾರೆ.

Comments are closed.