ರಾಷ್ಟ್ರೀಯ

ಒಂದೂವರೆ ದಶಕದ ನಂತರ ಮಾಯಾವತಿ ಚುನಾವಣಾ ಕಣಕ್ಕೆ!

Pinterest LinkedIn Tumblr


ಲಖನೌ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ನಾಯಕಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸ್ಪರ್ಧಿಸಲಿದ್ದಾರೆ. 2003ರಿಂದ ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ತಮ್ಮ 14 ವರ್ಷಗಳ ರಾಜಕೀಯ ವನವಾಸವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಅಥವಾ ಬಿಜ್ನೌರ್‌ನಿಂದ ಸ್ಪರ್ಧಿಸಲು ಒಲವು ವ್ಯಕ್ತಪಡಿಸಿದ್ದಾರೆ. ಇಂದಿಗೂ ಅಂಬೇಡ್ಕರ್ ನಗರವನ್ನು ಬಿಎಸ್‌ಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತದೆ.

1998, 1999 ಹಾಗೂ 2004 ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. ನಂತರ ಚುನಾವಣೆಗಳಲ್ಲಿ ಖುದ್ದು ಕಣಕ್ಕಿಳಿಯದೇ ಕೇವಲ ಪ್ರಚಾರದ ಜವಾಬ್ದಾರಿ ನಿಭಾಯಿಸಿ ರಾಜ್ಯಸಭೆ ಅಥವಾ ವಿಧಾನ ಪರಿಷತ್‌ಗೆ ಆಯ್ಕೆಯಾಗುತ್ತಿದ್ದರು. ಆದರೆ 2014ರ ಲೋಕಸಭೆ ಹಾಗೂ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ್ದು ಈ ಬಾರಿ ತಾವೇ ಚುನಾವಣಾ ಅಖಾಡಕ್ಕಿಳಿಯುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ನಿರ್ಧರಿಸಿದ್ದಾರೆ.

ಉ.ಪ್ರ.ಮುಖ್ಯಮಂತ್ರಿ ಮತ್ತು ಉಪ ಪ್ರತಿನಿಧಿಸುತ್ತಿದ್ದ ಗೋರಖ್‌ಪುರ ಹಾಗೂ ಪೂಲ್ಪುರ್ ಲೋಕಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಎಸ್‌ಪಿ ಬಿಎಸ್‌ಪಿ ಮೈತ್ರಿ ಆಡಳಿತಾರೂಢ ಬಿಜೆಪಿಯನ್ನು ಹತ್ತಿಕ್ಕಲು ಯಶಸ್ವಿಯಾದ ನಂತರ ಮುಂಬರುವ ಲೋಕಸಭಾ ಚುನಾವಣೆಗೂ ಮೈತ್ರಿಯನ್ನು ಮುಂದುವರಿಸಲು ಎರಡೂ ಪಕ್ಷಗಳು ಇಂಗಿತ ವ್ಯಕ್ತಪಡಿಸಿವೆ.

Comments are closed.