ರಾಷ್ಟ್ರೀಯ

ವಿಶ್ವವನ್ನು ಬೆರಗುಗೊಳಿಸಿದ ಸಾಮೂಹಿಕ ಆತ್ಮಹತ್ಯೆಯ ಕಥೆ

Pinterest LinkedIn Tumblr


ಹೊಸದಿಲ್ಲಿ: ಕಳೆದ ವಾರ ರಾಷ್ಟ್ರರಾಜಧಾನಿಯಲ್ಲಿ ನಡೆದಿದ್ದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದೇಶವನ್ನು ಬೆಚ್ಚಿಬೀಳಿಸಿತ್ತು. ಮೊದಲಿಗೆ ಅದೊಂದು ಕೊಲೆ ಎಂದು ಬಿಂಬಿತವಾಗಿದ್ದರೂ, ನಂತರ ತನಿಖೆ ನಡೆದು ಸಾಮೂಹಿಕ ಆತ್ಮಹತ್ಯೆ ಎಂದು ತಿಳಿದುಬಂದಿತ್ತು.

ಮೋಕ್ಷ ಪಡೆಯುವ ಉದ್ದೇಶದಿಂದ ಕುಟುಂಬವೊಂದು ಬಾಬಾ ಮಾಂತ್ರಿಕನ ಮಾತು ನಂಬಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿತ್ತು. ಅಲ್ಲದೆ ತನಿಖೆಯ ವಿವಿಧ ಹಂತದಲ್ಲಿ ವಿವಿಧ ಕಾರಣಗಳು ಮತ್ತು ಆತ್ಮಹತ್ಯೆ ಕುರಿತು ಹಲವು ಊಹಾಪೋಹಗಳು ಕೇಳಿಬಂದಿದ್ದವು.

ಆದರೆ ಭಾರತ ಮಾತ್ರವಲ್ಲದೆ, ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಇದೇ ರೀತಿಯಲ್ಲಿ ಮೋಕ್ಷ ಪಡೆಯುವ ಮತ್ತು ದೇವರು, ಧರ್ಮಗುರುವಿನ ಹೆಸರಿನಲ್ಲಿ ನಂಬಿಕೆಗೆ ಬಲಿಯಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತು ಸಂಚಿಗೆ ಬಲಿಯಾಗಿ ಸಾಮೂಹಿಕವಾಗಿ ಹತ್ಯೆಯಾದ ಪ್ರಮುಖ ನಾಲ್ಕು ಪ್ರಕರಣಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

ಕ್ಯಾಲಿಫೋರ್ನಿಯಾ ಹೆವನ್ಸ್ ಗೇಟ್ ಸಾಮೂಹಿಕ ಆತ್ಮಹತ್ಯೆ

1997ರ ಮಾರ್ಚ್‌ನಲ್ಲಿ ಕ್ಯಾಲಿಫೋರ್ನಿಯಾದ ರಾಂಚೋ ಸಂತಾ ಫೆಯ ಕಮ್ಯುನಿಟಿ ಆಫ್ ಸ್ಯಾನ್ ಡಿಯಾಗೊದಲ್ಲಿ 39 ಜನರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದ ಎಲ್ಲರೂ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದು, ಒಂದೇ ಮಾದರಿಯ ಉಡುಪು ಧರಿಸಿದ್ದರು.

ಆ ಪ್ರಕರಣದ ಬಗ್ಗೆ ತನಿಖೆ ನಡೆದಾಗ ಹೆವನ್ಸ್ ಗೇಟ್‌ನ ಸ್ಥಾಪಕ ಮಾರ್ಶಲ್ ಆ್ಯಪಲ್‌ವೈಟ್ ಸೂಚನೆಯಂತೆ ಅವರೆಲ್ಲ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವುದು ಪತ್ತೆಯಾಗಿತ್ತು.

ಹಾರುವ ತಟ್ಟೆಯೊಂದು ಬರಲಿದ್ದು, ಅದರಲ್ಲಿ ಅವರೆಲ್ಲರೂ ಭೂಮಿಯನ್ನು ತೊರೆದು, ಮನುಷ್ಯನಿಗಿಂತ ಉನ್ನತ ಸ್ಥಾನವನ್ನು ಪಡೆಯಲು ತೆರಳುತ್ತಿರುವುದಾಗಿ ಹೇಳಲಾಗಿತ್ತು. ಹಾಗೂ ಅದಕ್ಕಾಗಿ ಭೂಮಿಯನ್ನು ಬಿಟ್ಟು ಹೋಗಬೇಕಿದ್ದು, ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಲಾಗಿತ್ತು. ಮಾರ್ಶಲ್ ಸೂಚನೆ ಪಾಲಿಸಿದ್ದ ಅವರು ಆ್ಯಪಲ್‌ ಸಾಸ್‌ನಲ್ಲಿ ವಿಷ ಬೆರೆಸಿ ಸೇವಿಸಿದ್ದರು.

ಸ್ವಿಟ್ಜರ್‌ಲ್ಯಾಂಡ್‌ನ ಆರ್ಡರ್‌ ಆಫ್ ದಿ ಸೋಲಾರ್ ಟೆಂಪಲ್ ಪ್ರಕರಣ

ಸೋಲಾರ್ ಟೆಂಪಲ್ ಪ್ರಕರಣದಲ್ಲಿ ಹೆವನ್ಸ್ ಗೇಟ್ ಪ್ರಕರಣಕ್ಕೆ ಸಾಮ್ಯತೆಯಿತ್ತು. ಆರ್ಡರ್‌ ಆಫ್ ದಿ ಸೋಲಾರ್ ಟೆಂಪಲ್ ಸ್ಥಾಪಕ ಜೋಸೆಫ್‌ ಡಿ ಮಾಂಬ್ರೋ ಅಲ್ಲಿನ ನಿವಾಸಿಗಳನ್ನು ಬೇರೆಯದೇ ಗ್ರಹಕ್ಕೆ ಕರೆದೊಯ್ಯಲಿದ್ದಾರೆ ಎಂದು ನಂಬಲಾಗಿತ್ತು.

ಜೋಸೆಫ್‌ ಡಿ ಮಾಂಬ್ರೋ ಹಲವು ಪ್ರಕರಣಗಳಲ್ಲಿ 1994ರ ಸೆಪ್ಟೆಂಬರ್‌ನಿಂದ ಮಾರ್ಚ್‌ 1997ರವರೆಗೆ ಒಟ್ಟು 74 ಜನರ ಸಾವಿಗೆ ಕಾರಣವಾಗಿದ್ದನು. ಭೌತಿಕ ಜಗತ್ತಿನಿಂದ ಉನ್ನತ ಸ್ತರದ ಜೀವನಕ್ಕೆ ತೆರಳಲು ದಾರಿ ತೋರುವುದಾಗಿ ಹೇಳಿಕೊಂಡು ಆತ 74 ಜನರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದ.

ಉಗಾಂಡ ಎಂಆರ್‌ಟಿಸಿಜಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ

ಉಗಾಂಡದ ಕಾನುಂಗುವಿನ ದಿ ಮೂವ್‌ಮೆಂಟ್ ಫಾರ್‌ ದಿ ಟೆನ್ ಕಮಾಂಡ್‌ಮೆಂಟ್ಸ್‌ ಆಫ್ ದಿ ಗಾಡ್ (ಎಂಆರ್‌ಟಿಸಿಜಿ) ನಲ್ಲಿದ್ದ ಕ್ಯಾಥೋಲಿಕ್ ಗ್ರೂಪ್ ಒಂದು ಮಿಲೇನಿಯಂ ಕ್ಯಾಲೆಂಡರ್ ಆರಂಭವಾಗುತ್ತಿದ್ದಂತೆ ಜಗತ್ತು ಕೊನೆಯಾಗಲಿದೆ ಎಂದು ನಂಬಿದ್ದರು. ಹೀಗಾಗಿ ಆ ಸನ್ನಿವೇಶವನ್ನು ಎದುರುಗೊಳ್ಳಲು ತಯಾರಾಗಿ ಅವರೆಲ್ಲ ಸಜ್ಜಾಗುತ್ತಿದ್ದರು. ಆದರೆ ನಿಗದಿತ ದಿನದಂದು ಯಾವುದೇ ವಿಶೇಷ ವಿದ್ಯಮಾನ ಘಟಿಸಲಿಲ್ಲ. ಹೀಗಾಗಿ ನಾಯಕನ ಮೇಲೆ ಹಿಂಬಾಲಕರಿಗೆ ಅನುಮಾನ ಮೂಡತೊಡಗಿತು.

ಅದಕ್ಕಾಗಿ 2000ನೇ ಇಸವಿಯ ಮಾರ್ಚ್‌ 17ರಂದು ಮತ್ತೊಂದು ದಿನಾಂಕ ನಿಗದಿಪಡಿಸಲಾಯಿತು. ಆದರೆ ಅದಕ್ಕೂ ಮುಂಚೆ 78 ಮಕ್ಕಳ ಸಹಿತ 300 ಜನರು ಸಾಮೂಹಿಕವಾಗಿ ಸಾವನ್ನಪ್ಪಿದ್ದರು. ಅವರಿಗೆ ವಿಷಾಹಾರ ಉಣಿಸಲಾಗಿತ್ತು. ಅದು ಸಾಮೂಹಿಕ ಆತ್ಮಹತ್ಯೆ ಎಂದು ಬಿಂಬಿಸಲಾಯಿತಾದರೂ, ನಾಯಕರು ಅವರಿಗೆ ವಿಷಾಹಾರ ಉಣಿಸಿ, ಸಾಮೂಹಿಕ ಹತ್ಯೆ ಮಾಡಿದ್ದರು. ಕೊನೆಗೆ ತನಿಖೆ ನಡೆಸಿದಾಗ ವಿವಿಧ ಕಡೆ ಸಾಮೂಹಿಕ ಸಮಾಧಿ ಕಂಡುಬಂದಿದ್ದು, 780 ಜನರ ಶವ ಪತ್ತೆಯಾಗಿತ್ತು.

ಜೋನ್ಸ್‌ಟೌನ್ ಪೀಪಲ್ಸ್ ಟೆಂಪಲ್ ಸಾಮೂಹಿಕ ಹತ್ಯೆ ಪ್ರಕರಣ

1970ರಲ್ಲಿ ಗಯಾನದಲ್ಲಿ ಸ್ವಘೋಷಿತ ಧರ್ಮಗುರು ಜಿಮ್ ಜೋನ್ಸ್ ಸ್ಥಾಪಿಸಿದ್ದ ಸೋಶಿಯಲಿಸ್ಟ್‌ ಯುಟೋಫಿಯ ಸಮುದಾಯವನ್ನು ಜೋನ್ಸ್‌ಟೌನ್ ಎಂದು ಕರೆಯಲಾಗುತ್ತದೆ. 1978ರ ನವೆಂಬರ್‌ನಲ್ಲಿ ಜೋನ್ಸ್‌ಟೌನ್‌ನ ಪೀಪಲ್ಸ್ ಟೆಂಪಲ್‌ನಲ್ಲಿ 918 ಹಿಂಬಾಲಕರ ಶವ ಪತ್ತೆಯಾಗಿತ್ತು.

ಜಿಮ್‌ ಜೋನ್ಸ್ ಹಲವು ಹಗರಣದಲ್ಲಿ ಪಾಲ್ಗೊಂಡಿದ್ದರಿಂದ ಪೊಲೀಸರು ಆತನ ಬೆನ್ನುಹತ್ತುತ್ತಿದ್ದರು. ತನಿಖೆ ಮತ್ತಷ್ಟು ಬಿರುಸಾಗುತ್ತಿದ್ದಂತೆ ಆತ ತಪ್ಪಿಸಿಕೊಳ್ಳಲು ಹಲವು ಉಪಾಯ ಹುಡುಕುತ್ತಿದ್ದ. ಒಮ್ಮೆ ಅಮೆರಿಕದ ಸಂಸದ ಲಿಯೋ ರಾನ್ ಜೋನ್ಸ್‌ನ ಜೋನ್ಸ್‌ಟೌನ್‌ಗೆ ಪತ್ರಕರ್ತರೊಂದಿಗೆ ಭೇಟಿ ನೀಡಿದ್ದ. ಆ ಸಂದರ್ಭದಲ್ಲಿ ಆತನಿಗೆ ಜೋನ್ಸ್‌ಟೌನ್‌ನ ಚಟುವಟಿಕೆ ಮತ್ತು ಜನರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಸಂಶಯ ಬಂದಿತ್ತು. ಜನರು ತಮ್ಮನ್ನು ಅಲ್ಲಿಂದ ಪಾರುಮಾಡುವಂತೆ ಲಿಯೋನನ್ನು ಕೇಳಿಕೊಂಡಿದ್ದರು. ಅವರನ್ನು ಅಲ್ಲಿಂದ ಪಾರುಮಾಡಲು ಯತ್ನಿಸಿದ ಲಿಯೋ ಮತ್ತು ಪತ್ರಕರ್ತರನ್ನು ಜೋನ್ಸ್‌ ಗುಂಡಿಟ್ಟು ಕೊಲ್ಲಿಸಿದ.

ಜೋನ್ಸ್‌ಟೌನ್‌ ಹಿಂಬಾಲಕರು ಪರಾರಿಯಾಗಲು ಯತ್ನಿಸಿದ್ದನ್ನು ಕಂಡ ಜೋನ್ಸ್‌ ಅಲ್ಲಿನ ಜನರ ಸಭೆ ಕರೆದು ಎಲ್ಲರನ್ನೂ ಸೈನೆಡ್‌ ಮಿಶ್ರಿತ ಮದ್ದು ಕುಡಿಯುವಂತೆ ಆದೇಶಿಸಿದ. ಅವರಲ್ಲಿ 276 ಮಕ್ಕಳು ಕೂಡ ಇದ್ದರು. ನಂತರದಲ್ಲಿ ಹಿರಿಯರು ಕುಡಿಯಬೇಕಾಗಿತ್ತು. ಅಲ್ಲಿ ಸುಮಾರು 1000 ಜನರು ಸಾಮೂಹಿಕ ಹತ್ಯೆಗೊಳಗಾಗಿದ್ದರು.

Comments are closed.