ನವದೆಹಲಿ: ಭಾರತವು ಇತಿಹಾಸದಲ್ಲೇ ಕಾಣಸಿಗದಂಥ ನೀರಿನ ಸಮಸ್ಯೆ ಎದುರಿಸುತ್ತಿದೆ ಎಂಬ ಆತಂಕಕಾರಿ ಸುದ್ದಿಯನ್ನು ನೀತಿ ಆಯೋಗದ ವರದಿ ತಿಳಿಸಿದೆ.
ಪ್ರಸ್ತುತ ದೇಶದಲ್ಲಿ 600 ಮಿಲಿಯನ್ ಜನರು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ ಹಾಗೂ ಸುಮಾರು ಎರಡು ಲಕ್ಷ ಜನರು ಪ್ರತಿ ವರ್ಷ ಕುಡಿಯುವ ನೀರು ಸಿಗದೆ ಮೃತ ಪಡುತ್ತಿದ್ದಾರೆ. 2030ರ ವೇಳೆಗೆ ನೀರಿಗಿರುವ ಈಗಿನ ಬೇಡಿಕೆ ದುಪ್ಪಟ್ಟಾಗುವ ಸಾಧ್ಯತೆ ಇದ್ದು ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತದೆ. ಇದರಿಂದ ನೂರಾರು ಮಿಲಿಯನ್ ಜನರು ನೀರಿನ ಕೊರತೆ ಎದುರಿಸಬೇಕಿದೆ ಎಂದು ವರದಿ ತಿಳಿಸಿದೆ.
ಜಲ ಸಂಪನ್ಮೂಲ ಸಚಿವ ನಿಥಿನ್ ಗಡ್ಕರಿ ‘ಕಾಂಪೋಸಿಟ್ ವಾಟರ್ ಮ್ಯಾನೇಜ್ಮೆಂಟ್ ಇಂಡೆಕ್ಸ್’ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಮತ್ತೊಂದು ಆತಂಕಕಾರಿ ವಿಷಯವನ್ನು ತಿಳಿಸಿದೆ.
ಹೌದು, ಈ ವರದಿಯ ಪ್ರಕಾರ 2020ರ ವೇಳೆಗೆ 21 ಪ್ರಮುಖ ನಗರಗಳಲ್ಲಿ ಅಂತರ್ಜಲದಲ್ಲಿಯೂ ನೀರು ಸಿಗದ ಕಾರಣ 100 ಮಿಲಿಯನ್ ಜನ ತೊಂದರೆಗೊಳಗಾಗುತ್ತಾರೆ ಎನ್ನಲಾಗಿದೆ.
ಈಗಾಗಲೇ ದೇಶದ ಶೇ. 70ರಷ್ಟು ನೀರು ಕಲುಷಿತಗೊಂಡಿರುವುದರಿಂದಲೇ ನೀರಿನ ಗುಣಮಟ್ಟದ ಪಟ್ಟಿಯಲ್ಲಿ 122 ದೇಶಗಳಲ್ಲಿ ಭಾರತ 120ನೇ ಸ್ಥಾನದಲ್ಲಿರುವುದು ಎಂದು ವರದಿ ತಿಳಿಸಿದೆ.
ಈ ವರದಿಯಲ್ಲಿ ದೇಶದ ನೀರಿಗೆ ಸಂಬಂಧಪಟ್ಟಂತೆ ರಾಜ್ಯವಾರು ಸ್ಥಾನಮಾನವನ್ನೂ ಸಮೀಕ್ಷೆ ನಡೆಸಿದ್ದು, ಗುಜರಾತ್ ಉತ್ತಮ ರಾಜ್ಯ ಎಂದು ಗುರುತಿಸಲಾಗಿದೆ. ನಂತರ ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ತಮ ರಾಜ್ಯಗಳಾಗಿ ಹೆಸರುಳಿಸಿಕೊಂಡಿವೆ.
Comments are closed.