ಭೋಪಾಲ್ : 72 ವರ್ಷ ಪ್ರಾಯದ ಲಕ್ಷ್ಮೀ ಬಾಯಿ ಎಂಬ ಮಹಿಳೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ದಾಖಲೆ ಪತ್ರಗಳನ್ನು ನೀಟಾಗಿ ಮತ್ತು ವೇಗವಾಗಿ ಟೈಪ್ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಾರೆ. ಆಕೆಯ ಟೈಪಿಂಗ್ ವೇಗ, ತಪ್ಪಿಲ್ಲದೆ ಟೈಪ್ ಮಾಡುವ ಕಲೆ ಇಂದಿನ ಯುವಕ – ಯುವತಿಯರನ್ನು ನಾಚಿಸುವಂತಿದೆ. ಈ ಪ್ರಾಯದಲ್ಲೂ ಆಕೆ ತನ್ನ ಟೈಪಿಂಗ್ ವೃತ್ತಿಯಲ್ಲಿ ತೋರುತ್ತಿರುವ ಶ್ರದ್ಧೆ, ಆಸಕ್ತಿ ಮತ್ತು ಆ ಮೂಲಕ ಮಾಡುತ್ತಿರುವ ಸ್ವಾವಲಂಬನೆಯ ಬದುಕು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
“ನನ್ನ ಮಗಳು ಅಪಘಾತಕ್ಕೆ ಗುರಿಯಾದಾಗ ನಾನು ಮಾಡಿದ್ದ ಸಾಲವನ್ನು ತೀರಿಸಲು ಮತ್ತು ಸಣ್ಣದಾದ ಸ್ವಂತ ಮನೆಯನ್ನು ಹೊಂದಲು ನಾನು ಟೈಪಿಂಗ್ ವೃತ್ತಿ ನಡೆಸುತ್ತಿದ್ದೇನೆ’ ಎಂದು ಲಕ್ಷ್ಮೀ ಬಾಯಿ ಹೇಳುತ್ತಾರೆ.
ತನ್ನ ಈ ಟೈಪಿಂಗ್ ಸ್ವ-ಉದ್ಯೋಗಕ್ಕೆ ನೆರವಾದ ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಮತ್ತು ಎಸ್ಡಿಎಂ ಭಾವನಾ ವಿಳಂಬೆ ಅವರಿಗೆ ಲಕ್ಷ್ಮೀ ಬಾಯಿ ಸದಾ ತನ್ನ ಕೃತಜ್ಞತೆ ಸಲ್ಲಿಸುತ್ತಾರೆ.
ಈ ನಡುವೆ ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಳೆದ ಜೂನ್ 12ರಂದು ಲಕ್ಷ್ಮೀ ಬಾಯಿಯ “ಸೂಪರ್ ವೂಮನ್’ ಎಂಬ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಸೆಹವಾಗ್ ತಮ್ಮ ಟ್ಟಿಟರ್ನಲ್ಲಿ ಹೀಗೆ ಬರೆದಿದ್ದಾರೆ : ನನ್ನ ದೃಷ್ಟಿಯಲ್ಲಿ ಲಕ್ಷ್ಮೀ ಬಾಯಿ ಒಬ್ಬ ಸೂಪರ್ ವೂಮನ್. ಆಕೆ ಮಧ್ಯಪ್ರದೇಶದ ಸೇಹೋರ್ ವಾಸಿ; ನಮ್ಮ ಯುಕವರು ಆಕೆಯಿಂದ ಕಲಿಯುವುದು ತುಂಬಾ ಇದೆ. ಕೇವಲ ಟೈಪಿಂಗ್ ವೇಗವನ್ನು ಮಾತ್ರ ಅಲ್ಲ; ಯಾವುದೇ ಕೆಲಸ ಸಣ್ಣದಲ್ಲ ಎಂಬ ಸ್ಫೂರ್ತಿ ಮತ್ತು ಪಾಠವನ್ನು ಆಕೆಯಿಂದ ಕಲಿಯಬೇಕಿದೆ; ಏನನ್ನಾದರೂ ಕಲಿಯುವುದಕ್ಕೆ ಮತ್ತು ಕೆಲಸ ಮಾಡುವುದಕ್ಕೆ ಯಾವುದೇ ವಯಸ್ಸು ದೊಡ್ಡದಲ್ಲ ಎಂಬುದನ್ನು ನಾವು ಆಕೆಯಿಂದ ಕಲಿಯಬೇಕಿದೆ; ಪ್ರಣಾಮ್.
Comments are closed.