ರಾಷ್ಟ್ರೀಯ

ಸೆಲ್ಫಿ ಹುಚ್ಚಿಗೆ ಅಪ್ರಾಪ್ತ ಬಾಲಕನೊಬ್ಬ ಬಲಿ

Pinterest LinkedIn Tumblr


ವಿಜಯವಾಡ: ಸೆಲ್ಫಿ ಹುಚ್ಚಿಗೆ ಅಪ್ರಾಪ್ತ ಬಾಲಕನೊಬ್ಬ ಬಲಿಯಾಗಿದ್ದಾನೆ. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಜಗ್ಗಯ್ಯಪೇಟೆಯಲ್ಲಿ ಫೋಟೋ ತೆಗೆಯಲು ಹೋಗಿ ಹೈ ವೋಲ್ಟೇಜ್ ವಿದ್ಯುತ್ ತಂತಿ ಸಂಪರ್ಕಕ್ಕೆ ಬಂದ 15 ವರ್ಷದ ಬಾಲಕ ಕರೆಂಟ್ ಶಾಕ್ ಹೊಡೆಸಿಕೊಂಡು ಮೃತಪಟ್ಟಿದ್ದಾನೆ.

ಆಂಧ್ರ ಪ್ರದೇಶದ ಜಗ್ಗಯ್ಯಪೇಟೆ ರೈಲ್ವೆ ಸ್ಟೇಷನ್‌ನಲ್ಲಿ ಗೂಡ್ಸ್‌ ರೈಲು ಹತ್ತಿದ 15 ವರ್ಷದ ಬಾಲಕ ಪಗಡಾಲಾ ರಾಮಸಾಯಿ ಸೆಲ್ಫಿ ತೆಗೆಯಲೆಂದು ಹೋಗುತ್ತಾನೆ. ಈ ವೇಳೆ, 27 ಸಾವಿರ ವೋಲ್ಟ್ಸ್‌ನಷ್ಟು ವಿದ್ಯುತ್ ಪ್ರವಹಿಸುವ ವಿದ್ಯುತ್ ತಂತಿ ಸಂಪರ್ಕಕ್ಕೆ ಬಂದು ತೀವ್ರ ಗಾಯಗೊಂಡಿದ್ದಾನೆ. ತಕ್ಷಣ ಈತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಫಲಕಾರಿಯಾಗದೆ ರಾಮಸಾಯಿ ಮೃತಪಟ್ಟಿದ್ದಾನೆ. ಬಾಲಕ ಇತ್ತೀಚೆಗಷ್ಟೇ 10ನೇ ತರಗತಿ ಮುಗಿಸಿದ್ದು, ಜೂನಿಯರ್ ಕಾಲೇಜಿಗೆ ಸೇರಬೇಕಿತ್ತು. ಬುಧವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಗೆಳೆಯರ ಜತೆಗೆ ರಾಮಸಾಯಿ ರೈಲ್ವೆ ಸ್ಟೇಷನ್‌ಗೆ ಹೋಗಿದ್ದರು ಎಂದು ಜಗ್ಗಯ್ಯಪೇಟೆ ಎಸ್‌ಐ ಶ್ರೀ ಹರಿ ಮಾಹಿತಿ ನೀಡಿದ್ದಾರೆ.

ಅಲ್ಲದೆ, ರಾಮಸಾಯಿ ಹಾಗೂ ಗೆಳೆಯರು ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋ ಕ್ಲಿಕ್ಕಿಸುತ್ತಿರುತ್ತಾರೆ. ಈ ವೇಳೆ, ರೈಲ್ವೆ ಸ್ಟೇಷನ್‌ನಲ್ಲಿ ನಿಂತಿದ್ದ ಗೂಡ್ಸ್‌ ಟ್ರೈನು ಕಂಡ ರಾಮಸಾಯಿ, ರೈಲು ಹತ್ತಿ ಸೆಲ್ಫಿ ತೆಗೆದುಕೊಳ್ಳುವ ಐಡಿಯಾ ಮಾಡಿ ರೈಲು ಹತ್ತುತ್ತಾನೆ. ಬಳಿಕ ಕೆಲವೇ ಕ್ಷಣಗಳಲ್ಲಿ ವಿದ್ಯುತ್ ತಂತಿ ಸಂಪರ್ಕಕ್ಕೆ ಬರುತ್ತಾನೆ. ನಂತರ ಬೆಂಕಿ ಕಂಡು ಹಾಗೂ ಶಬ್ದವನ್ನು ಕೇಳಿದ ರೈಲ್ವೆ ಸಿಬ್ಬಂದಿ ಆತನನ್ನು ಕಾಪಾಡಲು ಹೋಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದಾಗ, ಅವರು ಪ್ರಥಮ ಚಿಕಿತ್ಸೆ ನೀಡಿ ವಿಜಯವಾಡದ ಆಸ್ಪತ್ರೆಗೆ ಸೇರಿಸಲು ಹೇಳುತ್ತಾರೆ. ನಂತರ, ಗೊಲ್ಲಾಪುಡಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಈತನನ್ನು ಸೇರಿಸಿದಾಗ, ಬಾಲಕ ಶೇ. 95 ರಷ್ಟು ಸುಟ್ಟು ಹೋಗಿದ್ದಾನೆ, ಈತ ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳುತ್ತಾರೆ. ಆದರೂ, ಐದು ಗಂಟೆಗಳ ಕಾಲ ಈತನಿಗೆ ಚಿಕಿತ್ಸೆ ನೀಡಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ರಾಮಸಾಯಿ ಮೃತಪಟ್ಟಿದ್ದಾನೆ.

Comments are closed.