ರಾಷ್ಟ್ರೀಯ

ಜನನಿಬಿಡ ರಸ್ತೆಯಲ್ಲಿ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಕಾಣುತ್ತಿದ್ದ ದೆವ್ವ ! ಕೊನೆಗೂ ಅಸಲಿಯತ್ತು ಬಯಲಿಗೆ …

Pinterest LinkedIn Tumblr

ವಿಜಯವಾಡ: ಜನನಿಬಿಡ ರಸ್ತೆಯಲ್ಲಿ ಮಧ್ಯರಾತ್ರಿ ಇದ್ದಕ್ಕಿದ್ದಂತೆ ದೆವ್ವ ಕಂಡುಬಂದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಆಂಧ್ರ ಪ್ರದೇಶದ ವಿಜಯವಾಡದ ಬಂದರು ರಸ್ತೆಯಲ್ಲಿ ಹಲವು ಮಂದಿ ರಾತ್ರಿ ತಿರುಗಾಡುತ್ತಿರುವಾಗ ದೆವ್ವ ಕಂಡಿದ್ದರು. ಪರಿಚಿತ ರಸ್ತೆಯಲ್ಲಿ ದಿನವೂ ಹೋಗಿಬರುವಾಗ ಕಾಣದ ದೆವ್ವ ಇದ್ದಕ್ಕಿದ್ದಂತೆ ಗೋಚರಿಸಿದ್ದರಿಂದ ಹಲವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅಲ್ಲದೆ ದೆವ್ವ ಇಲ್ಲ ಎಂದುಕೊಂಡ ಹಲವರು ಪರೀಕ್ಷಿಸಲೆಂದು ಬಂದರು ರಸ್ತೆಯಲ್ಲಿ ತೆರಳಿದ್ದಾಗಲೂ ವಿಕಾರವಾಗಿ ಕಿರುಚುತ್ತಾ ಎರಡು ದೆವ್ವಗಳು ಅವರಿಗೆ ಕಾಣಿಸಿಕೊಂಡು ಪರಾರಿಯಾಗಿದ್ದವು. ಹೀಗಾಗಿ ಪೊಲೀಸರು ಕೂಡ ಒಮ್ಮೆ ತೆರಳಿ ನೋಡಿ ಬಂದಿದ್ದರು. ಆಗಲೂ ಕಿರುಚುತ್ತಾ ಓಡಿ ದೆವ್ವ ಪರಾರಿಯಾಗಿತ್ತು.

ಆದರೆ ಮತ್ತಷ್ಟು ಜನರು ದೆವ್ವ ಕಾಣಿಸಿಕೊಳ್ಳುತ್ತಿದೆ, ರಸ್ತೆಯಲ್ಲಿ ಹೋಗುವಂತಿಲ್ಲ ಎಂದು ದೂರು ನೀಡಿದಾಗ ಹೆಚ್ಚಿನ ಸಂಖ್ಯೆಯ ಪೊಲೀಸರು ದೆವ್ವ ಕಾಣಿಸಿಕೊಳ್ಳುತ್ತಿದ್ದ ರಸ್ತೆಯಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆ ಸಮಯದಲ್ಲಿ ಪೊಲೀಸರನ್ನು ಕಂಡು ದೆವ್ವ ಓಡಿ ಹೋಗಿದೆ. ದೆವ್ವದ ಹಿಂದೆ ಓಡಿದ ಪೊಲೀಸರು ಅಲ್ಲಿ ಪರಿಶೀಲಿಸಿದಾಗ, ದೆವ್ವ ತೆರಳಿದಲ್ಲಿ ಮತ್ತಷ್ಟು ಜನರು ಇರುವುದು ಕಂಡುಬಂದಿದೆ.

ಕೊನೆಗೆ ಗಮನಿಸಿದಾಗ ಅಲ್ಲಿ ಐದಾರು ಮಂದಿಯ ಜತೆ ಇಬ್ಬರು ದೆವ್ವ ವೇಷಧಾರಿಗಳು ಇರುವುದು ಕಂಡುಬಂದಿದೆ. ವಿಚಾರಿಸಿದಾಗ ಅವರು ಕಿರುಚಿತ್ರ ಶೂಟಿಂಗ್‌ಗಾಗಿ ಅಲ್ಲಿ ಬಂದಿದ್ದರು ಎನ್ನುವುದು ತಿಳಿದುಬಂದಿದೆ. ಅವರನ್ನು ಠಾಣೆಗೆ ಕರೆತಂದ ಪೊಲೀಸರು ಪಾಲಕರನ್ನು ಕರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Comments are closed.