ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದಿಗೆ ನಾಲ್ಕು ವರ್ಷ ಪೂರೈಸಿ ಐದನೇ ವರ್ಷಕ್ಕೆ ಕಾಲಿಟ್ಟಿದೆ.
ಕೇಂದ್ರ ಸರ್ಕಾರಕ್ಕೆ ಇದು ಕೊನೆಯ ಹಾಗೂ ಚುನಾವಣಾ ವರ್ಷವಾಗಿರುವುದರಿಂದ ಸವಾಲುಗಳು ಬಹಳಷ್ಟಿದೆ. ಈ ನಾಲ್ಕು ವರ್ಷಗಳ ಸಾಧನೆ ಹೇಳಿಕೊಂಡು ಇನ್ನೊಂದು ವರ್ಷಕ್ಕೆ ಮೋದಿ ಸರ್ಕಾರ ಸಿದ್ಧವಾಗಬೇಕಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಮಣಿಸಿ ಅಧಿಕಾರಕ್ಕೆ ಬಂದ ಬಳಿಕ ವಿದೇಶಾಂಗ ನೀತಿ, ದೇಶದ ಅರ್ಥ ವ್ಯವಸ್ಥೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದೆ.
ದೇಶದಲ್ಲಿ ಕಪ್ಪುಹಣದ ಪ್ರಭಾವಳಿಯನ್ನು ತಗ್ಗಿಸಲು 2016ರ ನವೆಂಬರ್ ನಲ್ಲಿ ನೋಟು ನಿಷೇಧ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಕ್ಕಿದಂತಾಗಿದೆ. ಇದರ ಜತೆಗೆ ಹತ್ತ ವರ್ಷಗಳಿಂದ ಕಗ್ಗಂಟಾಗಿ ಉಳಿದಿದ್ದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ(ಜಿಎಸ್ ಟಿ)ಯನ್ನು ಜಾರಿ ಮಾಡಿದ್ದು ಕೇಂದ್ರ ಸರ್ಕಾರ ಸಾಧನೆಯಾಗಿದೆ.
ಇನ್ನು ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಈ ಹಿಂದೆ ಬಿಜೆಪಿಯ ಘೋಷವಾಕ್ಯವಾಗಿದ್ದ ಅಬ್ ಕಿ ಬಾರ್ ಮೋದಿ ಸರ್ಕಾರ್ ಬಳಿಕ 2019ರಲ್ಲೂ ಮೋದಿ ಸರ್ಕಾರ್( 2019 ಮೇ ಭೀ ಮೋದಿ ಸರ್ಕಾರ್) ಎಂಬ ಘೋಷವಾಕ್ಯದೊಂದಿಗೆ ಚುನಾವಣೆಗೆ ಮುಂದಾಗಲಿದೆ.
ದೆಹಲಿಯಲ್ಲಿ ಆಯೋಜಿಸಲಾಗುವ ಸಾಧನಾ ಸಮಾವೇಶದ ನೇತೃತ್ವವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಹಿಸಿಕೊಳ್ಳಲಿದ್ದು ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ 2019 ಮೇ ಭೀ ಮೋದಿ ಸರ್ಕಾರ್ ಎಂಬ ಘೋಷವಾಕ್ಯ ಬಳಸಲು ಉದ್ದೇಶಿಸಲಾಗಿದೆ.
Comments are closed.