ರಾಷ್ಟ್ರೀಯ

ದೇಶದ ಪ್ರಧಾನಿಯ ಹೆಸರು ಹೇಳಲು ಬಾರದ ಯುವಕನಿಗೆ ಥಳಿತ

Pinterest LinkedIn Tumblr


ಮಾಲ್ಡಾ: ದೇಶದ ಪ್ರಧಾನಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹೆಸರನ್ನು ಹೇಳಲು ಬಾರದಿದ್ದಕ್ಕೆ ಅಲೆಮಾರಿ ಕೂಲಿಕಾರನಿಗೆ ಮನಬಂದಂತೆ ಥಳಿಸಿದ ಹೇಯ ಘಟನೆ ಹೌರಾ- ಮಾಲ್ಡಾ ಫಾಸ್ಟ್ ಪ್ಯಾಸೆಂಜರ್ ರೈಲಿನಲ್ಲಿ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ.

ಮಾಲ್ಡಾದ ಕಾಲಿಯಾಚಾಕ್ ನಿವಾಸಿಯಾದ ಕೂಲಿ ಕಾರ್ಮಿಕ ಜಮಾಲ್ ಮೊಮಿನ್ ಮೇ 14ರಂದು ರೈಲಿನಲ್ಲಿ ತನ್ನೂರಿಗೆ ಮರಳುತ್ತಿದ್ದ. ರೈಲು ಹೌರಾ ಮತ್ತು ಬಂದೇಲ್ ರೈಲು ನಿಲ್ಣಾಣದಲ್ಲಿ ಸಾಗುತ್ತಿದ್ದಾಗ ರೈಲನ್ನೇರಿದ ನಾಲ್ಕು ಜನ ಯುವಕರು ಆತ ಕುಳಿತಿದ್ದ ಸೀಟ್ ಮೇಲೆ ಕಣ್ಣಿಟ್ಟಿದ್ದು ಹೇಗಾದರೂ ಆತನನ್ನು ಅಲ್ಲಿಂದ ಎಬ್ಬಿಸಿ ತಮ್ಮವರಲ್ಲೊಬ್ಬರು ಅಲ್ಲಿ ಕುಳಿತುಕೊಳ್ಳಬೇಕೆಂದು ಹೊಂಚು ಹಾಕಿದ್ದಾರೆ. ಅದಕ್ಕಾಗಿ ಅವರು ಆತನಿಗೆ ನಮ್ಮ ದೇಶದ ಪ್ರಧಾನಿ ಯಾರು, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಯಾರು, ನಮ್ಮ ರಾಷ್ಟ್ರಗೀತೆ ಯಾವುದು ಎಂದು ಪ್ರಶ್ನಿಸಿದ್ದಾರೆ. ನಾನು ಹೆಚ್ಚು ಓದಿಲ್ಲ. ನನಗಿದೆಲ್ಲ ಗೊತ್ತಿಲ್ಲ ಎಂದು ಗೋಗರೆದರೂ ಆತನನ್ನು ಬಿಡದೇ ಕಾಡಿದ ಅವರು ನವಾಜ್ ಷರೀಫ್ ಯಾರೆಂದು ಕೇಳಿದ್ದಾರೆ. ಅದಕ್ಕೂ ಆತನಲ್ಲಿ ಉತ್ತರವಿರಲಿಲ್ಲ.

ಅಷ್ಟಕ್ಕೆ ಸುಮ್ಮನಾಗದ ಪುಂಡ ಯುವಕರು ನೀನು ಪ್ರತಿದಿನ ನಮಾಜ್ ಮಾಡುತ್ತೀಯಾ ಎಂದು ಕೇಳಿದ್ದಾರೆ. ಅದಕ್ಕವನು ಹೌದು ಎಂದುತ್ತರಿಸಿದಾಗ ನೀನು ಪ್ರತಿದಿನ ಮಸೀದಿಗೆ ತೆರಳಿ ನಮಾಜ್ ಮಾಡುತ್ತೀಯಾ, ಆದರೆ ರಾಷ್ಟ್ರಗೀತೆ ಯಾವುದೆಂದು ತಿಳಿದಿಲ್ಲವೇ ಎಂದು ಕೂಗಾಡಿದ್ದಾರೆ. ಆತನ ಮೇಲೆ ದೈಹಿಕ ದಾಳಿ ನಡೆಸಿದ್ದಾರೆ. ಆತ ಕಣ್ಣೀರಿಟ್ಟರೂ ಬಿಡದೆ ಕಾಡಿದ ಅವರನ್ನು ರೈಲಿನಲ್ಲಿದ್ದ ಸಹ ಪ್ರಯಾಣಿಕರಲ್ಲಿ ಯಾರು ಕೂಡ ತಡೆಯಲಿಲ್ಲ.

ಬಳಿಕ ‘ಭಾರತ್ ಮಾತಾ ಕಿ ಜೈ’, ಎಂದು ಹೇಳಿ ಬಂದೇಲ್ ನಿಲ್ದಾಣದಲ್ಲಿ ಇಳಿಯುವಂತೆ ಹಿಂಸಿಸಿದ್ದಾರೆ.

ಜಮಾಲನಿಗೆ ನಾಲ್ವರು ಯುವಕರು ಶೋಷಿಸಿದ ವಿಡಿಯೋ ವೈರಲ್ ಆಗಿದ್ದು ಸ್ವಯಂ ಸೇವಾ ಸಂಸ್ಥೆಯೊಂದು ಸ್ವಯಂ ಪ್ರೇರಿತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

Comments are closed.