ರಾಷ್ಟ್ರೀಯ

ಊರಿನ ಜನರಿಗಾಗಿ ಈ 70ರ ವೃದ್ಧ ಮಾಡಿದ ಕೆಲಸವನ್ನು ಇಡೀ ದೇಶವೇ ಕೊಂಡಾಡುತ್ತಿದೆ….! ಅಂಥಾ ಕೆಲಸವೇನು ಗೊತ್ತೇ..?

Pinterest LinkedIn Tumblr

ಹದುವಾ(ಮಧ್ಯಪ್ರದೇಶ): ವಿಶ್ರಾಂತಿ ಪಡೆಯಬೇಕಾದ ವಯಸ್ಸಿನಲ್ಲಿ ಮಧ್ಯಪ್ರದೇಶದ 70ರ ವಯೋವೃದ್ಧ ಸೀತಾರಾಮ್‌ ರಜಪೂತ್‌ ಊರಿನ ನೀರಿನ ಕೊರತೆ ನೀಗಿಸಲು ಬಾವಿ ತೋಡುತ್ತಿದ್ದಾರೆ.

ಛತ್ತರ್‌ಪುರ ಪಂಚಾಯಿತಿ ವ್ಯಾಪ್ತಿಯ ಹದುವಾ ಹಳ್ಳಿ ಎರಡು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದೆ. ಇದನ್ನು ಪರಿಹರಿಸಲು ಸೀತಾರಾಮ್‌ ಮುಂದಾಗಿದ್ದಾರೆ. ಆತ್ಮವಿಶ್ವಾಸದ ಕೊರತೆಯಿರದ ಇಂತಹ ಜೀವಕ್ಕೆ ಸರ್ಕಾರದ ಮಾತಿರಲಿ, ಸ್ವಂತ ಊರಿನವರೇ ಸಹಾಯಕ್ಕೆ ಬಂದಿಲ್ಲ. ಯಾರಿಂದಲೂ ಸಹಾಯಹಸ್ತದ ನಿರೀಕ್ಷೆ ಮಾಡದೆ, ತಮ್ಮ ಕಾಯಕದಲ್ಲಿ ತೊಡಗಿದ್ದಾರೆ ಸೀತಾರಾಮ್‌.

ನೀರಿಗಾಗಿ ಇವರು 2015ರಿಂದ ಬಾವಿ ತೋಡಲು ಆರಂಭಿಸಿದ್ದರು. ಅದು 2017ರಲ್ಲಿ ಪೂರ್ಣಗೊಂಡಿತ್ತು. ಒಂದಷ್ಟು ನೀರು ಜಿನುಗಿತ್ತು. ದುರಾದೃಷ್ಟವಶಾತ್ ಆ ಬಾವಿ ಮಳೆಗಾಲದಲ್ಲಿ ಮಣ್ಣು ಕುಸಿತದಿಂದ ಮುಚ್ಚಲ್ಪಟ್ಟಿತು.

ಆದರೆ ಸೀತಾರಾಮ್‌ ಇದಕ್ಕೆ ಎದೆಗುಂದಲಿಲ್ಲ. ಮತ್ತೆ ಪ್ರಯತ್ನ ಆರಂಭಿಸಿ 33 ಅಡಿ ಆಳದಷ್ಟು ಕಂದಕ ಕೊರೆದಿದ್ದಾರೆ. 18 ತಿಂಗಳಿನಿಂದ ಮುಂಜಾನೆಯಿಂದ ಸೂರ್ಯ ನೆತ್ತಿಯ ಮೇಲೆ ಬರುವವರೆಗೂ, ಸಂಜೆಯಿಂದ ಕತ್ತಲಾಗುವವರೆಗೂ ನೆಲವನ್ನು ಅಗೆದಿದ್ದಾರೆ. ಮಣ್ಣನ್ನು ತಗ್ಗಿಂದ ತಂದು ಹೊರಹಾಕಿದ್ದಾರೆ. ಈಗ ಮತ್ತೇ ನೀರು ಜಿನುಗಿ ಊರ ಜನರ ದಾಹ ತಣಿಸಲಿದೆ ಎಂಬ ಭರವಸೆ ಅವರದ್ದಾಗಿದೆ.

ಈಗ ತೋಡಿರುವ ಬಾವಿ ಪುನ: ಕುಸಿಯದಂತೆ ಗೋಡೆಗೆ ಪ್ಲಾಸ್ಟರಿಂಗ್‌ ಮಾಡಲು ಸರ್ಕಾರದ ನೆರವನ್ನು ಸೀತಾರಾಮ್‌ ಎದುರು ನೋಡುತ್ತಿದ್ದಾರೆ.

Comments are closed.