ಹೊಸದಿಲ್ಲಿ: ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಹಣಕಾಸಿನ ಕೊರತೆಯಿರುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಬಿಜೆಪಿಗೆ ಹೋಲಿಸಿದರೆ ಕಾರ್ಪೋರೇಟ್ ದೇಣಿಗೆ ಪಡೆಯುವಲ್ಲಿ ಕಾಂಗ್ರೆಸ್ ತೀರಾ ಹಿಂದುಳಿದಿದ್ದು, ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚಕ್ಕೆ ಪಕ್ಷದಿಂದ ಹಣ ನೀಡಲಾಗುವುದಿಲ್ಲ ಎಂದು ತಿಳಿಸಿದೆ.
ಪಕ್ಷಕ್ಕೆ ಹಣಕಾಸಿನ ಕೊರತೆಯಿರುವುದರಿಂದ ರಾಜ್ಯಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮದೇ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಕಳೆದ ಐದು ತಿಂಗಳಿನಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡುವದನ್ನು ನಿಲ್ಲಿಸಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಮತ್ತು ಹಣಕಾಸು ಬೇಕಿರುವುದರಿಂದ ದೇಣಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಜತೆಗೆ ಕಾಂಗ್ರೆಸ್ ಈಗಾಗಲೇ ವಿವಿಧ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದರಿಂದ ವಿವಿಧ ಉದ್ಯಮಗಳಿಂದ ದೇಣಿಗೆ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಳಿ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಹಣವಿಲ್ಲ ಎಂದು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಿಭಾಗದ ರಮ್ಯಾ ಕೂಡ ಹೇಳಿದ್ದಾರೆ.
2017ರ ಮಾರ್ಚ್‌ನಲ್ಲಿ ಬಿಜೆಪಿ 1,034 ಕೋಟಿ ರೂ. ಆದಾಯ ಪಡೆದಿರುವುದಾಗಿ ಹೇಳಿಕೊಂಡಿದ್ದರೆ, ಕಾಂಗ್ರೆಸ್ 225 ಕೋಟಿ ರೂ. ಮಾತ್ರ ಪಡೆದಿದೆ. ಅಲ್ಲದೆ ಬಿಜೆಪಿ ದೇಣಿಗೆ ಸಂಗ್ರಹ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದ್ದರೆ, ಕಾಂಗ್ರೆಸ್ ಆದಾಯ ಕುಸಿತ ಕಾಣುತ್ತಿದೆ.
Comments are closed.