ರಾಷ್ಟ್ರೀಯ

ಜೆಡಿಯು ವಕ್ತಾರ ಮತ್ತು ಮಾಧ್ಯಮ ಪ್ರಭಾರಿ ಪ್ರಗತಿ ಮೆಹ್ತಾ ಹೆಂಡತಿ ಖುಷ್‌ಬೂ ಆತ್ಮಹತ್ಯೆ

Pinterest LinkedIn Tumblr


ಪಟ್ನಾ : ಜೆಡಿಯು ವಕ್ತಾರ ಮತ್ತು ಮಾಧ್ಯಮ ಪ್ರಭಾರಿಯಾಗಿರುವ ಪ್ರಗತಿ ಮೆಹ್ತಾ ಅವರ ಪತ್ನಿ ಖುಷ್‌ಬೂ ಕುಮಾರಿ ಅವರು ನಿನ್ನೆ ಮಂಗಳವಾರ ರಾತ್ರಿ ಜಮೂಯಿ ಜಿಲ್ಲೆಯ ಗಿಧೋರ್‌ ಎಂಬಲ್ಲಿರುವ ತಮ್ಮ ತಂದೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ಮನೆಯವರೆಲ್ಲರೂ ಊಟ ಮುಗಿಸಿ ಟೆರೇಸ್‌ನಲ್ಲಿ ಮಲಗಲು ಹೋದಾಗ ಖುಷ್‌ಬೂ ಅವರು ತಮ್ಮ ಮಗಳೊಂದಿಗೆ ಕೋಣೆಗೆ ಹೋದರು. ನಸುಕಿನ 4 ಗಂಟೆಯ ವೇಳೆಗೆ ಆಕೆಯ ದೇಹ ಸೀಲಿಂಗ್‌ ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂತು. ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಬಂದು ತನಿಖೆ ನಡೆಸಿದರು.

ಖುಷ್‌ಬೂ ಅವರ ಆತ್ಮಹತ್ಯೆಯ ಕಾರಣ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಆಕೆಯ ಮನೆಯವರ ಪ್ರಕಾರ ಎಲ್ಲವೂ ಸರಿಯೇ ಇದ್ದು ಆಕೆಯ ಈ ಅತಿರೇಕದ ಕ್ರಮಕ್ಕೆ ಯಾವುದೇ ಕಾರಣಗಳು ಕಂಡು ಬರುತ್ತಿಲ್ಲ ಎನ್ನಲಾಗಿದೆ.

ಖುಷ್‌ಬೂ ಅವರಿಗೆ ಆರು ವರ್ಷಗಳ ಹಿಂದೆ ಪ್ರಗತಿ ಮೆಹ್ತಾ ಜತೆಗೆ ಮದುವೆಯಾಗಿತ್ತು. ಮೆಹ್ತಾ ಅವರು ಪತ್ರಕರ್ತರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿ ಅನಂತರ ಆರ್‌ಜೆಡಿಯಲ್ಲಿ ರಾಜಕೀಯ ಅಧ್ಯಾಯ ಆರಂಭಿಸಿದ್ದರು. ಬಳಿಕ ಅವರು ನಿತೀಶ್‌ ಕುಮಾರ್‌ ಪಾಳಯ ಸೇರಿಕೊಂಡರು.

Comments are closed.