ಚೆನ್ನೈ:’ಕರ್ನಾಟಕದಲ್ಲಿ ನಿನ್ನೆ ನಡೆದಿರುವುದು ಪ್ರಜಾಪ್ರಭುತ್ವದ ಗೆಲುವು’ ಎಂದು ಖ್ಯಾತ ನಟ ಮತ್ತು ರಾಜಕಾರಣಿ ರಜನಿಕಾಂತ್ ಅವರು ಭಾನುವಾರ ಹೇಳಿಕೆ ನೀಡಿದ್ದು, ಜೊತೆಯಲ್ಲೇ ತಮಿಳುನಾಡಿಗೆ ಕಾವೇರಿ ನೀರನ್ನೂ ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಕ್ಕಳ್ ಮಂಡ್ರಂನ ಸಂಸ್ಥಾಪಕ ರಜನಿಕಾಂತ್ ‘ಸುಪ್ರೀಂ ಕೋರ್ಟ್‌ನ ಆದೇಶದಂತೆ ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ’ ಎಂದರು.
‘ರಾಜ್ಯಪಾಲರು ಬಿಜೆಪಿಗೆ ವಿಶ್ವಾಸ ಮತ ಸಾಬೀತು ಪಡಿಸಲು 15 ದಿನ ನೀಡಿದ್ದು ಪ್ರಜಾಪ್ರಭುತ್ವವನ್ನೇ ಅಪಹಾಸ್ಯ ಮಾಡಿದಂತಾಯಿತು. ನಾನು ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದು ನೀಡಿದ ತೀರ್ಪಿಗಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.
‘ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧೆ, ಮೈತ್ರಿ ಕುರಿತು ಈಗಲೇ ಹೇಳುವುದು ಬಹಳ ಮುಂಚಿತವಾಗುತ್ತದೆ. ನಮ್ಮ ಪಕ್ಷವಿನ್ನು ಹುಟ್ಟಿಲ್ಲ. ನಾವು ಎಲ್ಲದಕ್ಕೂ ಸಿದ್ದವಾಗಿದ್ದೇವೆ. ಚುನಾವಣೆ ಘೋಷಣೆಯಾದ ಬಳಿಕ ಆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.
ಕಾವೇರಿ ನೀರು ಕೋಡಿ !
‘ಯಾವುದೇ ಸರ್ಕಾರ ಬರಲಿ, ಕಾವೇರಿ ನದಿಯ ನೀರಿನ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಬೇಕು’ ಎಂದು ರಜನಿಕಾಂತ್ ಹೇಳಿದರು.
ಕುಮಾರಸ್ವಾಮಿ ತಿರುಗೇಟು !
ರಜನಿಕಾಂತ್ ಹೇಳಿಕೆ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ಅವರಿಗೆ ಮನವಿ ಮಾಡುತ್ತೇನೆ, ಕರ್ನಾಟಕಕ್ಕೆ ಬಂದು ನಮ್ಮ ಡ್ಯಾಂ ಪರಿಸ್ಥಿತಿ ನೋಡಿ, ರೈತರು ಏನಾಗಿದ್ದಾರೆ ಎಂದು ಪರಿಶೀಲನೆ ಮಾಡಿ. ಅದನ್ನು ನೋಡಿ ನಿಮಗೆ ನೀರು ಬೇಕು ಎಂದಾದರೆ ಚರ್ಚೆ ಮಾಡುವ’ ಎಂದಿದ್ದಾರೆ.
Comments are closed.