ರಾಷ್ಟ್ರೀಯ

ಮೋದಿ ತಮ್ಮ ಭಾಷಣದಲ್ಲಿ ತಂದೆಯ ಕುರಿತು ತಪ್ಪಾಗಿ ಉಲ್ಲೇಖಿಸಿರುವುದು ದುಃಖವಾಗಿದೆ: ಕಾರಿಯಪ್ಪ ಪುತ್ರ

Pinterest LinkedIn Tumblr


ಹೊಸದಿಲ್ಲಿ: ಭಾರತ ಸೇನೆಯ ಮಹಾನ್‌ ದಂಡನಾಯಕರೆನಿಸಿದ್ದ, ಕರ್ನಾಟಕ ಮೂಲದ ಫೀಲ್ಡ್ ಮಾರ್ಷಲ್‌ ಕಾರಿಯಪ್ಪ ಮತ್ತು ಜನರಲ್‌ ಕೆ.ಎಸ್‌. ತಿಮ್ಮಯ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ತಪ್ಪಾಗಿ ಉಲ್ಲೇಖಿಸಿರುವುದು ಅತೀವ ನೋವು ತಂದಿದೆ ಎಂದು ಕಾರಿಯಪ್ಪ ಅವರ ಪುತ್ರ ಕೆ.ಸಿ. ಕಾರಿಯಪ್ಪ ಹೇಳಿದ್ದಾರೆ. ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಆದ ತಪ್ಪಿಗಾಗಿ ಪಶ್ಚಾತ್ತಾಪ ವ್ಯಕ್ತಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ಪ್ರಧಾನಿ ಅವರು ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ಮತ್ತು ಮಾಜಿ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರನ್ನು ಉಲ್ಲೇಖಿಸಿ ನೀಡಿದ ತಪ್ಪು ಮಾಹಿತಿ ಬಗ್ಗೆ ಸ್ವತಃ ವಾಯು ಪಡೆಯ ಏರ್‌ ಮಾರ್ಷಲ್‌ ಆಗಿದ್ದ ಕೆ.ಸಿ. ಕಾರಿಯಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ಒದಗಿಸಿದ ಸಂಶೋಧಕರಿಂದ ಮೋದಿ ಹಾದಿ ತಪ್ಪಿದ್ದಾರೆ ಎಂದು ಟೀಕಿಸಿರುವ ಅವರು, ಪ್ರಧಾನಿ ಭಾಷಣದಲ್ಲಿ ಉಲ್ಲೇಖಿಸಲಾಗಿದ್ದ ಘಟನಾವಳಿಗಳ ತಪ್ಪು ಕಾಲಾನುಕ್ರಮಣಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮೋದಿ ಹೇಳಿದ್ದೇನು: ಭಾಷಣದ ವೇಳೆ ಪ್ರಧಾನಿ ಅವರು, ”ಭಾರತದ ಮೊದಲ ಸೇನಾ ದಂಡನಾಯಕರಾಗಿದ್ದ ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ಅವರನ್ನು ಆಗಿನ ಕಾಂಗ್ರೆಸ್‌ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಹಾಗೂ ರಕ್ಷಣಾ ಸಚಿವ ಕೃಷ್ಣ ಮೆನನ್‌ ಅಪಮಾನಿಸಿದ್ದರು. ಕಾರಿಯಪ್ಪ ಅವರು 1962ರಲ್ಲಿ ಇಂಡೊ-ಚೀನಾ ಯುದ್ಧದಲ್ಲಿ ಸೇನಾಪಡೆಯ ನೇತೃತ್ವ ವಹಿಸಿದ್ದರು,” ಎಂದು ಮೋದಿ ಹೇಳಿದ್ದರು. ಆದರೆ, ವಾಸ್ತವವಾಗಿ ಆ ವೇಳೆಗಾಗಲೇ ಫೀಲ್ಡ್‌ ಮಾರ್ಷಲ್‌ ನಿವೃತ್ತಿಯಾಗಿ 9 ವರ್ಷಗಳೇ ಕಳೆದಿದ್ದವು.

ಅಷ್ಟೇ ಅಲ್ಲ, ಕಾರಿಯಪ್ಪ ಸೇನಾ ದಂಡನಾಯಕರಾಗಿದ್ದಾಗ ಕೃಷ್ಣ ಮೆನನ್‌ ರಕ್ಷಣಾ ಸಚಿವರಾಗಿದ್ದರೆಂದು ಮೋದಿ ಉಲ್ಲೇಖಿಸಿದ್ದರು. ವಾಸ್ತವವಾಗಿ ಈ ಸಂದರ್ಭ ಬಲದೇವ್‌ ಸಿಂಗ್‌ ಅವರು ರಕ್ಷಣಾ ಸಚಿವರಾಗಿದ್ದರು. ”ಪ್ರಧಾನಿ ಹುದ್ದೆಯಲ್ಲಿರುವವರಿಗೆ ಅಧ್ಯಯನ ನಡೆಸುವಷ್ಟು ಸಮಯವಿರುವುದಿಲ್ಲ. ಆದರೆ, ಪ್ರಧಾನಿಗೆ ತಪ್ಪು ಮಾಹಿತಿ ನೀಡಿ, ಅವರ ಹಾದಿ ತಪ್ಪಿಸಿದ ವ್ಯಕ್ತಿಯನ್ನು ಸರಿಯಾಗಿ ಝಾಡಿಸಬೇಕು,” ಎಂದಿದ್ದಾರೆ.

ವಿವಾದ ಭುಗಿಲೆದ್ದಿದ್ದು ಜ.ತಿಮ್ಮಯ್ಯ ಮತ್ತು ಕೃಷ್ಣ ಮೆನನ್‌ ಅವರ ನಡುವೆಯಷ್ಟೆ. ನನ್ನ ತಂದೆ ಮತ್ತು ಕೃಷ್ಣ ಮೆನನ್‌ ನಡುವೆ ಯಾವುದೇ ವಿವಾದವಿರಲಿಲ್ಲ.ಏಕೆಂದರೆ, ನನ್ನ ತಂದೆ ಇಲ್ಲಿದ್ದಾಗ ಕೃಷ್ಣ ಮೆನನ್‌ ಅವರು ವಿಶ್ವಸಂಸ್ಥೆಯಲ್ಲಿದ್ದರು – ಕೆ.ಸಿ. ಕಾರಿಯಪ್ಪ, ಕೆ.ಎಂ. ಕಾರಿಯಪ್ಪ ಅವರ ಪುತ್ರ

Comments are closed.