ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳ

Pinterest LinkedIn Tumblr

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆ ಸೋಮವಾರ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 17 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 21 ಪೈಸೆಯಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಮೂಲಕ ಚುನಾವಣಾ ರಂಗು ಬಿಸಿಯೇರಿದ್ದ ಕರ್ನಾಟಕದಲ್ಲಿ ಮತದಾನ ಮುಗಿದ ನಂತರ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೊಲ್ ಬೆಲೆ ಲೀಟರ್ ಗೆ 76 ರೂಪಾಯಿ 01 ಪೈಸೆ ಹಾಗೂ ಡೀಸೆಲ್ ಬೆಲೆ 67 ರೂಪಾಯಿ 27 ಪೈಸೆಯಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 74 ರೂಪಾಯಿ 80 ಪೈಸೆ, ಡೀಸೆಲ್ ಬೆಲೆ 66 ರೂಪಾಯಿ 14 ಪೈಸೆಗಳಿಗೆ ಏರಿಕೆಯಾಗಿದೆ.

ಈ ಮೂಲಕ ಡೀಸೆಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಕಳೆದ 56 ತಿಂಗಳುಗಳಲ್ಲಿ ದಾಖಲೆ ಏರಿಕೆ ಕಂಡುಬಂದಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ವಾರಗಳವರೆಗೆ ಇಂಧನ ಬೆಲೆ ಹೆಚ್ಚಳವನ್ನು ತಡೆಹಿಡಿಯಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದರೂ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೂ ಕೂಡ ಚುನಾವಣೆ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಮಾಡದಿದ್ದುದರಿಂದ ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸಮಾರು 500 ಕೋಟಿ ನಷ್ಟವುಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ ತಿಂಗಳು ಏಪ್ರಿಲ್ 24ರಂದು ಪರಿಷ್ಕರಿಸಲಾಗಿತ್ತು. ಅಂದು 13 ಪೈಸೆಯಷ್ಟು ಹೆಚ್ಚಿಸಿ ನಂತರ ಬೆಲೆ ಏರಿಕೆಯನ್ನು ತಡೆಹಿಡಿಯಲಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲವಾಗಲು ಇಂಧನ ಬೆಲೆ ಹೆಚ್ಚಿಸದಂತೆ ತೈಲ ಕಂಪೆನಿಗಳಿಗೆ ಆದೇಶ ನೀಡಿತ್ತು ಎಂದು ಹೇಳಲಾಗುತ್ತಿದ್ದರೂ ತೈಲ ಕಂಪೆನಿಗಳು ಇದನ್ನು ಒಪ್ಪುತ್ತಿಲ್ಲ. ಒಂದೇ ಸಮನೆ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಹೊರೆಯಾಗುವುದು ಬೇಡ ಎಂಬ ಕಾರಣದಿಂದ ಮೂರು ವಾರಗಳ ಕಾರ ತಡೆಹಿಡಿಯಲಾಗಿತ್ತು ಎಂದು ಸಬೂಬು ಹೇಳುತ್ತಿವೆ.

Comments are closed.