ರಾಷ್ಟ್ರೀಯ

ಸೈನಿಕನನ್ನು ಚಚ್ಚಿದ ಬಿಹಾರದ ಉದ್ರಿಕ್ತ ಗುಂಪು: ತೇಜಸ್ವಿ ವಿಡಿಯೋ

Pinterest LinkedIn Tumblr

6
ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧದ ಹೊಸ ದಾಳಿಯೊಂದರಲ್ಲಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಅವರು ನಿನ್ನೆ ಶುಕ್ರವಾರ ತಮ್ಮ ಅಧಿಕೃತ ಟ್ವಿಟರ್‌ ಖಾತೆಗೆ ವಿವಾದಾತ್ಮಕ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಬಿಹಾರದ ಉದ್ರಿಕ್ತ ಜನಸಮೂಹವೊಂದು ವ್ಯಕ್ತಿಯನ್ನು ಹಿಡಿದು ನಿರ್ದಯವಾಗಿ ಚಚ್ಚುತ್ತಿರುವುದು ಕಂಡು ಬರುತ್ತದೆ. ಈ ವಿಡಿಯೋದಲ್ಲಿ ಮಾರಣಾಂತಿಕ ಹಲ್ಲೆಗೆ ಗುರಿಯಾಗುತ್ತಿರುವ ವ್ಯಕ್ತಿಯು ಸೇನೆಯ ಒಬ್ಬ ಯೋಧ ಎಂದು ಹೇಳುವ ತೇಜಸ್ವಿ, “ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಗತಿ ಹೀಗೇಕೆ ಇದೆ’ ಎಂದು ಸಿಎಂ ನಿತೀಶ್‌ ಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ.

ಆದರೆ ತೇಜಸ್ವಿ ಅಪ್‌ಲೋಡ್‌ ಮಾಡಿರುವ ವಿಡಿಯೋ ಗ್ರಾಫಿಕ್‌ ಸ್ವರೂಪದಲ್ಲಿದ್ದು ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಝೀ ನ್ಯೂಸ್‌ ವರದಿ ಮಾಡಿದೆ.

ತೇಜಸ್ವಿ ಯಾದವ್‌ ಹೇಳಿರುವ ಪ್ರಕಾರ ವ್ಯಕ್ತಿಯೊಬ್ಬನನ್ನು ಉದ್ರಿಕ್ತ ಗುಂಪು ಮಾರಣಾಂತಿಕವಾಗಿ ಚಚ್ಚುವ ಈ ಘಟನೆಯು ಪೊಲೀಸ್‌ ಠಾಣೆಯೊಂದರ ಸಮೀಪವೇ ನಡೆದಿದೆ. ರಾಜ್ಯದಲ್ಲಿ ಜನರಿಗೆ ಈ ರೀತಿ ಕಾನೂನನ್ನು ಕೈಗತ್ತಿಕೊಳ್ಳಲು ಬಿಟ್ಟಿರುವುದಾದರೂ ಏಕೆ ಎಂದು ತೇಜಸ್ವಿ ಅವರು ನಿತೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಘಟನೆ ನಡೆದ ಸ್ಥಳ, ದಿನ ಇತ್ಯಾದಿಗಳ ಯಾವುದೇ ವಿವರಗಳನ್ನು ಅವರು ನೀಡಿಲ್ಲ.

ಆರ್‌ಜೆಡಿ ಮುಖ್ಯಸ್ಥರಾಗಿರುವ ತಮ್ಮ ತಂದೆ ಲಾಲು ಪ್ರಸಾದ್‌ ಯಾದವ್‌ ಅವರನ್ನು ದಿಲ್ಲಿಯ ಏಮ್ಸ್‌ ಆಸ್ಪತ್ರೆಯಿಂದ ರಾಂಚಿಯ ಆಸ್ಪತ್ರೆಗೆ ವರ್ಗಾಯಿಸುವ ಮೂಲಕ ಕೊಲೆ ಸಂಚು ನಡೆಸಲಾಗಿದೆ ಎಂದು ಆರೋಪಿಸಿರುವ ತೇಜಸ್ವಿ ಅವರು ಈಚೆಗೆ ತಮ್ಮ ತಾಯಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಭದ್ರತೆಯನ್ನು ಕಿತ್ತು ಹಾಕಿ ಅನಂತರ ಪುನರ್‌ಸ್ಥಾಪಿಸಿರುವುದನ್ನು ರಾಜಕೀಯ ಪಿತೂರಿ ಎಂದು ವರ್ಣಿಸಿದ್ದರು.

-Udayavani

Comments are closed.